ADVERTISEMENT

ಉತ್ತಮ ರಸ್ತೆಗಳು ಬೇಕು ಎಂದರೆ ಹಣ ನೀಡಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ

ಪಿಟಿಐ
Published 16 ಸೆಪ್ಟೆಂಬರ್ 2021, 12:24 IST
Last Updated 16 ಸೆಪ್ಟೆಂಬರ್ 2021, 12:24 IST
ನಿತಿನ್‌ ಗಡ್ಕರಿ
ನಿತಿನ್‌ ಗಡ್ಕರಿ   

ಸೋಹನಾ, ಹರಿಯಾಣ: ‘ದೇಶದಲ್ಲಿ ಉತ್ತಮ ರಸ್ತೆಗಳು, ಸಂಚಾರಕ್ಕಾಗಿ ಮೂಲಸೌಕರ್ಯಗಳು ಬೇಕು ಎಂದರೆ ಜನರು ಹಣ ನೀಡಬೇಕಾಗುತ್ತದೆ’ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಗುರುವಾರ ಇಲ್ಲಿ ಹೇಳಿದರು.

ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೇ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ನಂತರ ಅವರು ಮಾತನಾಡಿದರು.

ಟೋಲ್‌ ಶುಲ್ಕಗಳಿಂದಾಗಿ ಪ್ರಯಾಣದ ವೆಚ್ಚ ಹೆಚ್ಚುತ್ತಿದೆ ಎಂಬ ದೂರುಗಳನ್ನು ಪ್ರಸ್ತಾಪಿಸಿದ ಅವರು, ‘ಹವಾನಿಯಂತ್ರಿತ ಕಲ್ಯಾಣಮಂಟಪದಲ್ಲಿ ಮದುವೆ ಮಾಡಬೇಕು ಎಂದರೆ ನೀವು ಹಣ ನೀಡಬೇಕು. ಇಲ್ಲದಿದ್ದರೆ, ಹೊಲದಲ್ಲಿಯೇ ಮದುವೆ ಕಾರ್ಯಕ್ರಮ ಆಯೋಜಿಸಬೇಕು’ ಎಂದು ಹೇಳಿದರು.

ADVERTISEMENT

‘ದೇಶದ ಹಲವೆಡೆ ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸಲಾಗಿದೆ. ಇವುಗಳಿಂದಾಗಿ ಪ್ರಯಾಣದ ಅವಧಿ ಕಡಿಮೆಯಾಗಿದೆ. ಇಂಧನಗಳ ವೆಚ್ಚವೂ ತಗ್ಗಿದೆ’ ಎಂದರು.

‘ರೈತರು ಹೆದ್ದಾರಿಗಳಿಗೆ ಸಮೀಪವಿರುವ ತಮ್ಮ ಜಮೀನನ್ನು ರಿಯಲ್‌ ಎಸ್ಟೇಟ್‌ ಡೆವಲೆಪರ್‌ಗಳಿಗೆ ಮಾರಾಟ ಮಾಡಬಾರದು. ಅವರೊಂದಿಗೆ ಪಾಲುದಾರರಾಗಿ, ಹೆದ್ದಾರಿ ಪಕ್ಕ ವಿವಿಧ ಸೌಲಭ್ಯಗಳನ್ನು ನಿರ್ಮಿಸಬೇಕು’ ಎಂದೂ ಅವರು ಅಭಿಪ್ರಾಯಪಟ್ಟರು.

‘ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೇಯಿಂದಾಗಿ ಪ್ರಯಾಣದ ಅವಧಿ 12 ಗಂಟೆಗೆ ಇಳಿಯಲಿದೆ. ದೆಹಲಿಯಿಂದ ಮುಂಬೈಗೆ ತೆರಳಲು ಟ್ರಕ್‌ವೊಂದು 48 ಗಂಟೆ ತೆಗೆದುಕೊಳ್ಳುತ್ತದೆ. ಅದೇ ಎಕ್ಸ್‌ಪ್ರೆಸ್‌ವೇನಲ್ಲಿ ಸಾಗಿದರೆ 18 ಗಂಟೆ ಸಾಕು’ ಎಂದ ಅವರು, ‘ಈ ಕಾರಣಗಳಿಂದಾಗಿ ಒಂದು ಟ್ರಕ್‌ ಹೆಚ್ಚು ಬಾರಿ ಸಂಚರಿಸಲು ಸಾಧ್ಯ. ಇದರಿಂದ ವ್ಯವಹಾರವೂ ಹೆಚ್ಚುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.