ADVERTISEMENT

Sanatana: ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ನನ್ನ ವಿರುದ್ಧ ಅರ್ಜಿ- ಸ್ಟಾಲಿನ್

ಜಾತಿ ಪ್ರಾಬಲ್ಯದ ವಿರುದ್ಧ ನಿಲುವು ಹೊಂದುವುದು ಸಂವಿಧಾನ ಬಾಹಿರವಲ್ಲ ಎಂದು ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ್ದಾರೆ.

ಪಿಟಿಐ
Published 17 ಅಕ್ಟೋಬರ್ 2023, 8:46 IST
Last Updated 17 ಅಕ್ಟೋಬರ್ 2023, 8:46 IST
ಉದಯನಿಧಿ ಸ್ಟಾಲಿನ್
ಉದಯನಿಧಿ ಸ್ಟಾಲಿನ್   

ಚೆನ್ನೈ: ಸನಾತನ ಧರ್ಮ ನಿರ್ಮೂಲನೆ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ನನ್ನ ದೃಷ್ಟಿಕೋನವನ್ನು ವ್ಯಕ್ತಪಡಿಸಿದ್ಧೇನೆ ಎಂದು ಡಿಎಂಕೆ ನಾಯಕ ಮತ್ತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಮದ್ರಾಸ್ ಹೈಕೋರ್ಟ್‌ನಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣದಿಂದ ಅರ್ಜಿ ಸಲ್ಲಿಸಲಾಗಿದೆ. ಅರ್ಜಿದಾರರು ಹಿಂದೂ ಬಲಪಂಥೀಯ ಸಂಘಟನೆ ಎಂದು ಅವರು ಹೇಳಿದರು. ಸನಾತನ ಧರ್ಮ ನಿರ್ಮೂಲನೆ ಕುರಿತು ಹೇಳಿಕೆ ನೀಡಿದ ಆರೋಪದ ಮೇಲೆ ಮದ್ರಾಸ್​ ಹೈಕೋರ್ಟ್​ನಲ್ಲಿ ದಾಖಲಾಗಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಅನಿತಾ ಸುಮಂತ್ ನಡೆಸಿದರು.

‌ಉದಯನಿಧಿ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ವಿಲ್ಸನ್, ಸಂವಿಧಾನದ 25ನೇ ವಿಧಿ ಯಾವುದೇ ಧರ್ಮವನ್ನು ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ನೀಡುತ್ತದೆ. ಇದು ಜನರಿಗೆ ನಾಸ್ತಿಕತೆಯನ್ನು ಅನುಸರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ನೀಡುತ್ತದೆ. ಸಂವಿಧಾನದ ವಿಧಿ 19 (1) (ಎ) ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತದೆ ಎಂದು ಹೇಳಿದರು.

ADVERTISEMENT

ಕಳೆದ ತಿಂಗಳು ನಡೆದ ಕಾರ್ಯಕ್ರಮವೊಂದರಲ್ಲಿ ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿಯೂ ಅಧಿಕಾರದಲ್ಲಿ ಉದಯನಿಧಿ ಅವರ ಮುಂದುವರಿಕೆಯನ್ನು ಪ್ರಶ್ನಿಸಿ ಬಲಪಂಥೀಯ ಸಂಘಟನೆ ಹಿಂದೂ ಮುನ್ನಾನಿ ಕ್ವೋ ವಾರಂಟ್ ಸಲ್ಲಿಸಿತ್ತು.

ಡಿಎಂಕೆ ನಾಯಕರು ಬಲಪಂಥೀಯ ಸಿದ್ಧಾಂತವನ್ನು ವಿರೋಧಿಸುತ್ತಿರುವ ಕಾರಣ ಅರ್ಜಿದಾರರು ಈ ಪ್ರಕರಣವನ್ನು ದಾಖಲಿಸಿದ್ದಾರೆ. ಸ್ಟಾಲಿನ್ ಅವರು ಸ್ವಾಭಿಮಾನ, ಸಮಾನತೆ ಮತ್ತು ಸಹೋದರತ್ವದ ಬಗ್ಗೆ ಮಾತನಾಡಿದ್ದಾರೆ ಎಂದು ಸ್ಟಾಲಿನ್ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದರು.

ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ ಬೆನ್ನಲ್ಲೇ ತಮ್ಮ ಕಕ್ಷಿದಾರರು ಕೂಡಲೇ ಸ್ಪಷ್ಟನೆಯನ್ನು ನೀಡಿದ್ದಾರೆ. ತಾವು ಎಲ್ಲಾ ಜಾತಿ, ಧರ್ಮಗಳ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದು, ಯಾರ ನಂಬಿಕೆಗೂ ಧಕ್ಕೆ ಉಂಟು ಮಾಡುವ ಉದ್ದೇಶವನ್ನು ಹೊಂದಿಲ್ಲ. ಅದಲ್ಲದೆ ಸಮಾಜವನ್ನು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ವಿಭಜಿಸಲು ಹೊರಟವರ ಬಗ್ಗೆ ಮಾತನಾಡಲು ಅವರು ಬದ್ಧರಾಗಿದ್ದಾರೆ ಎಂದು ಸ್ಟಾಲಿನ ಪರ ವಿಲ್ಸನ್​ ವಾದ ಮಂಡಿಸಿದ್ದಾರೆ.

ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಲಯ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 31ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.