
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಜ್ಮೇರ್ ಷರೀಫ್ ದರ್ಗಾಗೆ ‘ಚಾದರ್’ ನೀಡದಂತೆ ತಡೆ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ರಜಾಕಾಲದ ಪೀಠದ ಎದುರು ಈ ಅರ್ಜಿಯನ್ನು ಸಲ್ಲಿಸಲಾಗಿದೆ. ಆದರೆ, ನ್ಯಾಯಪೀಠವು, ಅರ್ಜಿಯನ್ನು ಸೋಮವಾರದ ವಿಚಾರಣೆಗೆ ಪಟ್ಟಿಮಾಡಲಾಗದು ಎಂದು ತಿಳಿಸಿದೆ.
ಅರ್ಜಿದಾರ ಜಿತೇಂದ್ರ ಸಿಂಗ್ ಹಾಗೂ ಇತರರ ಪರ ಹಾಜರಾಗಿದ್ದ ವಕೀಲ ವರುಣ್ ಸಿನ್ಹಾ ಅವರಿಗೆ, ವಿಚಾರಣೆ ಬೇಗ ನಡೆಯಬೇಕು ಎಂಬ ಬಯಕೆಯಿದ್ದಲ್ಲಿ ರಿಜಿಸ್ಟ್ರಿಯನ್ನು ಸಂಪರ್ಕಿಸುವಂತೆಯೂ ನ್ಯಾಯಪೀಠ ಸೂಚಿಸಿದೆ.
‘ಮೊಯಿನುದ್ದೀನ್ ಚಿಶ್ತಿ ಅವರ ಅಜ್ಮೇರ್ ಷರೀಫ್ ದರ್ಗಾಗೆ ಭಾರತದ ಪ್ರಧಾನಿ ಚಾದರ್ ಕೊಡುವ ಸಂಪ್ರದಾಯವನ್ನು 1947ರಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಆರಂಭಿಸಿದರು. ಅದು ಹಾಗೆಯೇ ಮುಂದುವರಿದಿದೆ. ಆದರೆ, ಇದು ಸಂವಿಧಾನ ಅಥವಾ ಕಾನೂನು ಪ್ರಕಾರ ಅನುಸರಿಸಲೇಬೇಕಾದ ನಿಯಮವಲ್ಲ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.