ADVERTISEMENT

ಮಹಾರಾಷ್ಟ್ರದಲ್ಲೂ 100ರ ಗಡಿ ದಾಟಿದ ಪೆಟ್ರೋಲ್

ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಈಗಾಗಲೇ 100ರ ಗಡಿ ದಾಟಿದೆ

ಪಿಟಿಐ
Published 10 ಮೇ 2021, 6:51 IST
Last Updated 10 ಮೇ 2021, 6:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ವಾರದಿಂದೀಚೆಗೆ ಪೆಟ್ರೋಲ್‌, ಡೀಸೆಲ್ ದರ ಏರಿಕೆಯಾಗುತ್ತಲೇ ಇದ್ದು,ಸೋಮವಾರವೂ ಪೆಟ್ರೋಲ್‌ ಬೆಲೆ ಲೀಟರ್‌ಗೆ 26 ಪೈಸೆ ಮತ್ತು ಡೀಸೆಲ್‌ ಬೆಲೆ ಲೀಟರ್‌ಗೆ 33 ‍ಪೈಸೆಯಷ್ಟು ಏರಿಕೆಯಾಗಿದೆ. ಒಂದು ಲೀಟರ್‌ ಪೆಟ್ರೋಲ್‌ ದರ 100 ರೂಪಾಯಿಗಿಂತ ಅಧಿಕಗೊಂಡಿರುವ ರಾಜಸ್ಥಾನ, ಮಧ್ಯಪ್ರದೇಶಗಳ ಸಾಲಿಗೆ ಇದೀಗ ಮಹಾರಾಷ್ಟ್ರವೂ ಸೇರ್ಪಡೆಯಾಗಿದೆ.

ಮೇ 4 ರಿಂದ ಇಲ್ಲಿವರೆಗೆ ಐದು ಬಾರಿ ತೈಲ ಬೆಲೆಯನ್ನು ಏರಿಸಲಾಗಿದೆ. ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ದರ ಪರಿಷ್ಕರಣೆಯಲ್ಲಿ ವಿರಾಮ ನೀಡಿದ್ದವು.

ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿ ಲೀಟರ್‌ ಪೆಟ್ರೋಲ್ ಬೆಲೆ ₹102.42 ಮತ್ತು ಮಧ್ಯಪ್ರದೇಶ ರಾಜ್ಯದ ಅನುಪ್ಪುರನಲ್ಲಿ ₹ 102.02. ಸೋಮವಾರದ ಬೆಲೆ ಏರಿಕೆಯಿಂದಾಗಿ ಮಹಾರಾಷ್ಟ್ರದ ಪರ್ಬಾನಿ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹100.20, ಡೀಸೆಲ್ ಬೆಲೆ ಲೀಟರ್‌ಗೆ ₹99.55. ಆಗಿದೆ.

ADVERTISEMENT

ಪೆಟ್ರೋಲ್‌ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರಲು ಆಯಾ ರಾಜ್ಯಗಳು ವಿಧಿಸುವ ವ್ಯಾಟ್, ಸಾಗಣೆ ದರಗಳು ಕಾರಣ. ರಾಜಸ್ಥಾನದಲ್ಲಿ ದೇಶದಲ್ಲೇ ಅತ್ಯಧಿಕ ಪ್ರಮಾಣದ ವ್ಯಾಟ್ ವಿಧಿಸಲಾಗುತ್ತಿದ್ದರೆ, ಮಧ್ಯಪ್ರದೇಶ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಸಹ ವ್ಯಾಟ್ ಪ್ರಮಾಣ ಅಧಿಕವೇ ಇರುವುದದರಿಂದ ಇದೀಗ ಅಲ್ಲಿ ಸಹ ಲೀಟರ್‌ ಪೆಟ್ರೋಲ್‌ ದರ 100ರ ಗಡಿ ದಾಟುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.