ADVERTISEMENT

₹36ಕ್ಕೆ ಪೆಟ್ರೋಲ್‌ ರಫ್ತು: ಕಾಂಗ್ರೆಸ್‌ ಆರೋಪ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 19:55 IST
Last Updated 31 ಆಗಸ್ಟ್ 2018, 19:55 IST
   

ನವದೆಹಲಿ: ಭಾರತದಲ್ಲಿ ಮಾರಾಟ ಆಗುತ್ತಿರುವುದಕ್ಕಿಂತ ಕಡಿಮೆ ದರದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಬೇರೆ ದೇಶಗಳಿಗೆ ಕೇಂದ್ರ ಸರ್ಕಾರವು ಮಾರಾಟ ಮಾಡುತ್ತಿದೆ. ಈ ಮೂಲಕ ದೇಶದ ಜನರಿಗೆ ದ್ರೋಹ ಎಸಗಿದೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಆರೋಪಿಸಿದ್ದಾರೆ.

‘ಭಾರತದಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹78–86ರಷ್ಟು ಇದೆ. ಡೀಸೆಲ್‌ ದರ ಲೀಟರ್‌ಗೆ ₹70–75ರಷ್ಟಿದೆ. ಆದರೆ, ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆದ ಮಾಹಿತಿಯ ಪ್ರಕಾರ ಕೇಂದ್ರ ಸರ್ಕಾರವು 15 ದೇಶಗಳಿಗೆ ಲೀಟರ್‌ಗೆ ₹34ರಂತೆ ಪೆಟ್ರೋಲ್‌ ಮತ್ತು 29 ದೇಶಗಳಿಗೆ ಲೀಟರ್‌ಗೆ ₹37ರಂತೆ ಡೀಸೆಲ್‌ ಪೂರೈಕೆ ಮಾಡುತ್ತಿದೆ. ಇಂಗ್ಲೆಂಡ್‌, ಆಸ್ಟ್ರೇಲಿಯಾ, ಅಮೆರಿಕ, ಮಲೇಷ್ಯಾ ಮತ್ತು ಇಸ್ರೇಲ್‌ ಈ ಪಟ್ಟಿಯಲ್ಲಿ ಸೇರಿವೆ. ಈ ರೀತಿಯಲ್ಲಿ ಸರ್ಕಾರವು ಜನರ ಬೆನ್ನಿಗೆ ಇರಿದಿದೆ’ ಎಂದು ಅವರು ಆರೋಪಿಸಿದ್ದಾರೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂದು ಕಳೆದ ಜುಲೈನಲ್ಲಿ ಕಾಂಗ್ರೆಸ್‌ ಪಕ್ಷವು ಒತ್ತಾಯಿಸಿತ್ತು. ಆದರೆ, ಸರ್ಕಾರ ಮತ್ತು ಬಿಜೆಪಿ ಇದಕ್ಕೆ ಒಪ್ಪಲಿಲ್ಲ. ದೇಶದ ಜನರು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸುರ್ಜೇವಾಲಾ ಹೇಳಿದ್ದಾರೆ.

ADVERTISEMENT

ಪೆಟ್ರೋಲ್‌ ಮೇಲಿನ ಎಕ್ಸೈಸ್‌ ಸುಂಕವು 2014ರ ಮೇಯಲ್ಲಿ ಲೀಟರ್‌ಗೆ ₹9.2 ಇತ್ತು. ಈಗ ಅದು ₹19.48ಕ್ಕೆ ಏರಿಕೆಯಾಗಿದೆ. ಡೀಸೆಲ್‌ ಮೇಲಿನ ಸುಂಕವು 2014ರ ಮೇಯಲ್ಲಿ ಲೀಟರ್‌ಗೆ ₹3.46ರಷ್ಟು ಇತ್ತು. ಈಗ ಅದು ₹15.33ಕ್ಕೆ ಏರಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಎಕ್ಸೈಸ್‌ ಸುಂಕವನ್ನು 12 ಬಾರಿ ಏರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ತೈಲದ ಮೇಲೆ ಸರ್ಕಾರವು ಹೇರಿರುವ ಭಾರಿ ತೆರಿಗೆಯಿಂದಾಗಿ ಬೆಲೆಯು ಈಗ ಗರಿಷ್ಠ ಮಟ್ಟಕ್ಕೇರಿದೆ. ಈ ತೆರಿಗೆ ಒಂದರಿಂದಲೇ ಕೇಂದ್ರ ಸರ್ಕಾರವು ಈವರೆಗೆ ₹11 ಲಕ್ಷ ಕೋಟಿ ಲಾಭ ಮಾಡಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.