ADVERTISEMENT

ಕೇರಳ: ಹಿಂಸಾರೂಪಕ್ಕೆ ತಿರುಗಿದ ಪಿಎಫ್‌ಐ ಬಂದ್– ಕೆಎಸ್‌ಆರ್‌ಟಿಸಿ ಬಸ್ ಧ್ವಂಸ

ಅರ್ಜುನ್ ರಘುನಾಥ್
Published 23 ಸೆಪ್ಟೆಂಬರ್ 2022, 6:06 IST
Last Updated 23 ಸೆಪ್ಟೆಂಬರ್ 2022, 6:06 IST
ಕೇರಳ: ಹಿಂಸಾರೂಪಕ್ಕೆ ತಿರುಗಿದ ಪಿಎಫ್‌ಐ ಬಂದ್– ಕೆಎಸ್‌ಆರ್‌ಟಿಸಿ ಬಸ್ ಧ್ವಂಸ: ಪಿಟಿಐ ಚಿತ್ರ
ಕೇರಳ: ಹಿಂಸಾರೂಪಕ್ಕೆ ತಿರುಗಿದ ಪಿಎಫ್‌ಐ ಬಂದ್– ಕೆಎಸ್‌ಆರ್‌ಟಿಸಿ ಬಸ್ ಧ್ವಂಸ: ಪಿಟಿಐ ಚಿತ್ರ   

ತಿರುವನಂತಪುರ: ಎನ್‌ಐಎ, ಇ.ಡಿ ದಾಳಿ ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕರೆ ನೀಡಿರುವ ಕೇರಳ ಬಂದ್ ಹಿಂಸಾರೂಪಕ್ಕೆ ತಿರುಗಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿದ್ದು, ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ ಧ್ವಂಸಗೊಂಡಿದೆ. .

ತಿರುವನಂತಪುರಂನಲ್ಲಿ ಒಂದು ಆಟೋ ರಿಕ್ಷಾ ಮತ್ತು ಕಾರಿಗೆ ಹಾನಿಯಾಗಿದೆ.

ADVERTISEMENT

ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ, ಎನ್‌ಐಎ ಮತ್ತು ಇತರ ಏಜೆನ್ಸಿಗಳು ಗುರುವಾರ ಪಿಎಫ್‌ಐ ಕಚೇರಿಗಳು ಮತ್ತು ಸಂಬಂಧಿತ ವ್ಯಕ್ತಿಗಳ ನಿವಾಸಗಳ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಪಿಎಫ್‌ಐ ಈ ಬಂದ್‌ಗೆ ಕರೆ ನೀಡಿದೆ.

ತಿರುವನಂತಪುರಂ ಮತ್ತು ಕಣ್ಣೂರಿನಲ್ಲಿ ವಿಮಾನ ನಿಲ್ದಾಣಗಳಿಗೆ ತೆರಳುತ್ತಿದ್ದ ವಾಹನಗಳ ಮೇಲೂ ಕಲ್ಲು ತೂರಾಟ ನಡೆದಿದೆ. ಕೊಲ್ಲಂ ಜಿಲ್ಲೆಯಲ್ಲಿ, ದ್ವಿಚಕ್ರ ವಾಹನದಲ್ಲಿ ಬಂದ ಪಿಎಫ್‌ಐ ಕಾರ್ಯಕರ್ತರು ಜನರನ್ನು ತಡೆಯಲು ಯತ್ನಿಸಿದ್ದಾರೆ. ಈ ಸಂದರ್ಭ ಮಧ್ಯಪ್ರವೇಶಿಸಿದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಕೆಡವಿದ್ದಾರೆ. ಕಣ್ಣೂರಿನ ನಾರಾಯಣಪಾರಾದಲ್ಲಿ ಬೆಳಿಗ್ಗೆ ದಿನಪತ್ರಿಕೆಗಳನ್ನು ಸಾಗಿಸುತ್ತಿದ್ದ ವಾಹನದ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಲಪ್ಪುಳದಲ್ಲಿ ಕಲ್ಲು ತೂರಾಟ ನಡೆಸಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳು, ಟ್ಯಾಂಕರ್ ಲಾರಿ ಮತ್ತು ಇತರ ಕೆಲವು ವಾಹನಗಳು ಜಖಂಗೊಂಡಿವೆ.

ಪಿಎಫ್‌ಐ ಕಾರ್ಯಕರ್ತರು ನಡೆಸಿದ ಕಲ್ಲು ತೂರಾಟದಲ್ಲಿ ಕೋಯಿಕ್ಕೋಡ್‌ ಮತ್ತು ಕಣ್ಣೂರಿನಲ್ಲಿ ಕ್ರಮವಾಗಿ 15 ವರ್ಷದ ಯುವತಿ ಮತ್ತು ಆಟೋ ಚಾಲಕ ಗಾಯಗೊಂಡಿದ್ದಾರೆ.

ಈ ಮಧ್ಯೆ ಕೇರಳ ರಾಜ್ಯದಾದ್ಯಂತ ಭದ್ರತೆ ಹೆಚ್ಚಿಸಿರುವ ಪೊಲೀಸರು, ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಕಲ್ಲು ತೂರಾಟದ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಸಾರಿಗೆ ಬಸ್‌ಗಳನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಹಲವೆಡೆ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಲಾಗಿದೆ.

ಭಯೋತ್ಪಾದನೆಗೆ ಕುಮ್ಮಕ್ಕು ಆರೋಪದಡಿ ದೆಶದ 11 ರಾಜ್ಯಗಳಲ್ಲಿ ಪಿಎಫ್‌ಐ ಕಚೇರಿಗಳು ಮತ್ತು ಕಾರ್ಯಕರ್ತರ ಮನೆ ಮೇಲೆ ಎನ್‌ಐಎಎ ದಾಳಿ ನಡೆಸಿತ್ತು. 100ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಕೇರಳ ಒಂದರಲ್ಲೆ 20ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.