ಸುಪ್ರೀಂ ಕೋರ್ಟ್
ನವದೆಹಲಿ: ಸ್ನಾತಕೋತ್ತರ ಅಲೋಪಥಿ ವಿದ್ಯಾರ್ಥಿಗಳಿಗೆ ನೀಡುವಷ್ಟೇ ಮೊತ್ತದ ತರಬೇತಿ ಭತ್ಯೆಯನ್ನು (ಸ್ಟೈಪೆಂಡ್) ಸ್ನಾತಕೋತ್ತರ ಆಯುರ್ವೇದ ವಿದ್ಯಾರ್ಥಿಗಳಿಗೆ ನೀಡಲು ಸಾಧ್ಯವಿಲ್ಲ, ಎರಡೂ ಕೋರ್ಸ್‌ಗಳ ವಿದ್ಯಾರ್ಥಿಗಳು ಮಾಡುವ ಕೆಲಸ ಒಂದೇ ರೀತಿಯದ್ದಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರು ಇದ್ದ ನ್ಯಾಯಪೀಠವು ಮಧ್ಯಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದೆ.
ಸ್ನಾತಕೋತ್ತರ ಆಯುರ್ವೇದ ಹಾಗೂ ಸ್ನಾತಕೋತ್ತರ ಅಲೋಪಥಿ ವಿದ್ಯಾರ್ಥಿಗಳು ಮಾಡುವ ಕೆಲಸವು ಒಂದೇ ಸ್ವರೂಪದ್ದಲ್ಲ ಎಂದು ಗುಜರಾತ್ ಸರ್ಕಾರ ಹಾಗೂ ಡಾ.ಪಿ.ಎ. ಭಟ್ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ ಎಂದು ಮಧ್ಯಪ್ರದೇಶ ಸರ್ಕಾರದ ಪರವಾಗಿ ವಾದಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಸೌರಭ್ ಮಿಶ್ರಾ ತಿಳಿಸಿದರು.
‘ವಾಸ್ತವ ಏನೆಂದರೆ, ತರಬೇತಿ ಭತ್ಯೆಯ ಮೊತ್ತವನ್ನು ಪರಿಷ್ಕರಿಸಲಾಗಿದೆ. ಈಗ ಈ ಎರಡೂ ವಿಭಾಗಗಳ ವಿದ್ಯಾರ್ಥಿಗಳಿಗೆ ನೀಡುವ ಭತ್ಯೆಯಲ್ಲಿ ದೊಡ್ಡ ವ್ಯತ್ಯಾಸ ಇಲ್ಲ’ ಎಂದು ಅವರು ವಿವರಿಸಿದರು. ಸ್ನಾತಕೋತ್ತರ ಅಲೋಪಥಿ ವಿದ್ಯಾರ್ಥಿಗಳು ನಿಭಾಯಿಸುವಂತಹ ಕೆಲಸಗಳನ್ನು ತಾವು ಮಾಡುತ್ತಿದ್ದರೂ, ಭತ್ಯೆಯ ವಿಚಾರದಲ್ಲಿ ತಮಗೆ ತಾರತಮ್ಯ ಎಸಗಲಾಗುತ್ತಿದೆ ಎಂದು ಸ್ನಾತಕೋತ್ತರ ಆಯುರ್ವೇದ ವಿದ್ಯಾರ್ಥಿಗಳು ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.