ADVERTISEMENT

ಅಮೆರಿಕದಿಂದ ಗಡೀಪಾರಾದ ಭಾರತೀಯರ ಕೈಗೆ ಕೋಳ ಹಾಕಿ ಅವಮಾನ: ಕಾಂಗ್ರೆಸ್ ಕಿಡಿ

ಪಿಟಿಐ
Published 5 ಫೆಬ್ರುವರಿ 2025, 10:10 IST
Last Updated 5 ಫೆಬ್ರುವರಿ 2025, 10:10 IST
<div class="paragraphs"><p>ಕೈಗೆ ಕೋಳ ಹಾಕಿ ವಿಮಾನ ಹತ್ತುತ್ತಿರುವ ವಲಸಿಗರು, ಪವನ್ ಕೇರಾ</p></div>

ಕೈಗೆ ಕೋಳ ಹಾಕಿ ವಿಮಾನ ಹತ್ತುತ್ತಿರುವ ವಲಸಿಗರು, ಪವನ್ ಕೇರಾ

   

ನವದೆಹಲಿ: ‘ಅಕ್ರಮವಾಗಿ ನೆಲೆಸಿರುವ ಆರೋಪದಡಿ ಅಮೆರಿಕದಿಂದ ಗಡೀಪಾರಾಗಿರುವ ಭಾರತೀಯರ ಕೈಗೆ ಕೋಳ ತೊಡಿಸಿ ಕಳಹಿಸುವ ಮೂಲಕ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ’ ಎಂದು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. 

ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡೊನಾಲ್ಡ್ ಟ್ರಂಪ್ ಅವರು ಅಕ್ರಮವಾಗಿ ಅಮೆರಿಕದಲ್ಲಿ ನೆಲೆಸಿರುವವರನ್ನು ಗಡೀಪಾರು ಮಾಡುವ ಆದೇಶಕ್ಕೆ ಸಹಿ ಹಾಕಿದ್ದರು. ಅದರ ಭಾಗವಾಗಿ ಭಾರತೀಯರನ್ನು ಹೊತ್ತ ಸೇನಾ ವಿಮಾನ ಸಿ–17 ಗ್ಲೋಬ್‌ಸ್ಟರ್‌ ಟೆಕ್ಸಾಸ್‌ನಿಂದ ಹೊರಟು ಪಂಜಾಬ್‌ಗೆ ಬಂದಿದೆ. ಈ ಕುರಿತು ಮಾಹಿತಿ ನೀಡಿರುವ ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯು, ‘ವಲಸೆ ನೀತಿಯನ್ನು ಅಮೆರಿಕ ಭಿಗಿಗೊಳಿಸಿದೆ. ಅಕ್ರಮವಾಗಿ ನೆಲೆಸಿರುವವರನ್ನು ದೇಶದಿಂದ ಹೊರಹಾಕಲಾಗುತ್ತಿದೆ’ ಎಂದಷ್ಟೇ ಹೇಳಿದೆ.

ADVERTISEMENT

2013ರಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಗಡೆ ಅವರನ್ನು ನಡೆಸಿಕೊಂಡ ರೀತಿಗೆ ಅಂದಿನ ಯುಪಿಎ ಸರ್ಕಾರ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಅಮೆರಿಕ ಕ್ಷಮೆ ಯಾಚಿಸಿತ್ತು ಎಂದು ಕಾಂಗ್ರೆಸ್‌ನ ಮಾಧ್ಯಮ ವಿಭಾಗ ಮುಖ್ಯಸ್ಥ ಪವನ್ ಖೇರಾ ನೆನಪಿಸಿಕೊಂಡಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಷಯ ಹಂಚಿಕೊಂಡಿರುವ ಅವರು, ‘ಅಮೆರಿಕದಿಂದ ಕಳುಹಿಸುತ್ತಿರುವ ಭಾರತೀಯರ ಕೈಗೆ ಕೋಳ ತೊಡಿಸಿರುವ ಚಿತ್ರವನ್ನು ಕಂಡು ಭಾರತೀಯನಾದ ನನ್ನಲ್ಲಿ ತೀವ್ರ ಬೇಸರವನ್ನುಂಟು ಮಾಡಿದೆ. 2013ರಲ್ಲಿ ದೇವಯಾನಿ ಅವರ ಕೈಗೂ ಕೋಳ ತೊಡಿಸಿ ಅಮೆರಿಕದಿಂದ ಕಳುಹಿಸಲಾಗಿತ್ತು. ಇದರ ವಿರುದ್ಧ ಅಮೆರಿಕದ ರಾಯಭಾರಿ ನ್ಯಾನ್ಸಿ ಪೊವೆಲ್‌ ಅವರ ಬಳಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದರು’ ಎಂದಿದ್ದಾರೆ.

‘ಇದಕ್ಕೆ ಅಂದಿನ ಯುಪಿಎ ಸರ್ಕಾರ ಖಡಕ್‌ ಸಂದೇಶವನ್ನು ಅಮೆರಿಕಕ್ಕೆ ರವಾನಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಕಳುಹಿಸಿದ ನಿಯೋಗದಲ್ಲಿದ್ದ ಜಾರ್ಜ್ ಹೋಲ್ಡಿಂಗ್, ಪೀಟ್ ಒಲ್ಸನ್‌, ಡೇವಿಡ್‌ ಶ್ವೆಕರ್ಟ್‌, ರಾಬ್‌ ವುಡ್‌ಲ್ಯಾಂಡ್‌, ಮೆಡೆಲಿನ್‌ ಬೊರ್ಡಾಲೊ ಅವರನ್ನು ಪಕ್ಷದ ಮುಖಂಡರಾದ ಮೀರಾ ಕುಮಾರ್, ಸುಶಿಲ್ ಕುಮಾರ್ ಶಿಂದೆ, ರಾಹುಲ್ ಗಾಂಧಿ ಭೇಟಿ ಮಾಡಿ ಪ್ರತಿಭಟನೆ ದಾಖಲಿಸಿದ್ದರು’ ಎಂದು ನೆನಪಿಸಿಕೊಂಡಿದ್ದಾರೆ.

ಭಾರತದ ಅಧಿಕಾರಿಯನ್ನು ಅಮೆರಿಕ ನಡೆಸಿಕೊಂಡ ರೀತಿ ಶೋಚನೀಯ

‘ಭಾರತದ ಅಧಿಕಾರಿ ದೇವಯಾನಿ ಅವರನ್ನು ನಡೆಸಿಕೊಂಡ ರೀತಿ ಶೋಚನೀಯ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರು. ಅಮೆರಿಕದ ರಾಯಭಾರ ಕಚೇರಿಗೆ ಭಾರತ ನೀಡುತ್ತಿದ್ದ ಹಲವು ಸೌಲಭ್ಯಗಳನ್ನು ಮೊಟಕುಗೊಳಿಸಲಾಗಿತ್ತು. ಇದರಲ್ಲಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದ ಆಹಾರ, ಮದ್ಯ ಸೇರಿದ್ದವು’ ಎಂದಿದ್ದಾರೆ.

‘ಅಮೆರಿಕದ ಎಂಬೆಸಿ ಶಾಲೆಯ ಹಣಕಾಸು ವ್ಯವಹಾರಗಳ ಕುರಿತು ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಿತು. ದೇವಯಾನಿ ಅವರನ್ನು ನಡೆಸಿಕೊಂಡ ರೀತಿಗೆ ಜಾನ್ ಕೇರಿ ಬೇಸರ ವ್ಯಕ್ತಪಡಿಸಿದ್ದರು. ಸುಜಾತಾ ಸಿಂಗ್ ಅವರನ್ನು ಕರೆಯಿಸಿಕೊಂಡ ಅಮೆರಿಕ ಆಡಳಿತ, ಕ್ಷಮೆ ಕೇಳಿತ್ತು’ ಎಂದು ಖೇರಾ ಹೇಳಿದ್ದಾರೆ.

1999ರ ತಂಡದ ಐಎಫ್‌ಎಸ್ ಅಧಿಕಾರಿಯಾಗಿದ್ದ ಖೋಬ್ರಗಡೆ ಅವರ ಮೇಲೆ ವಿಸಾ ವಂಚನೆ ಆರೋಪ ಹೋರಿಸಿ ನ್ಯೂಯಾರ್ಕ್‌ನಲ್ಲಿ ಬಂಧಿಸಲಾಗಿತ್ತು. ಇದು ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಡಿಸಿತ್ತು. 

2024ರಲ್ಲಿ ಸಾವಿರ ಜನರ ಗಡೀಪಾರು

ಭಾರತೀಯರ ಗಡೀಪಾರು ಕುರಿತು ಪ್ರತಿಕ್ರಿಯಿಸಿರುವ ಸಂಸದ ಶಶಿ ತರೂರ್, ‘ಅಮೆರಿಕದಿಂದ 150ಕ್ಕೂ ಹೆಚ್ಚು ಭಾರತೀಯರನ್ನು ಅಕ್ರಮ ವಲಸೆ ಆರೋಪದಡಿ ಗಡೀಪಾರು ಮಾಡಲಾಗುತ್ತಿದೆ. ಆದರೆ ಇದರ ಮೇಲೆ ಬೆಳಕು ಚೆಲ್ಲಬೇಕಾದ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿದೆ. ಇಂಥ ಪ್ರಕರಣ ಇದೇ ಮೊದಲಲ್ಲ ಹಾಗೂ ಇದಕ್ಕೆ ಡೊನಾಲ್ಡ್ ಟ್ರಂಪ್ ಹೊಣೆಯಲ್ಲ. ಏಕೆಂದರೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ  1,100 ಭಾರತೀಯರನ್ನು ಗಡೀಪಾರು ಮಾಡಲಾಗಿತ್ತು. ಅಮೆರಿಕದಲ್ಲಿ ಸುಮಾರು 7.25 ಲಕ್ಷ ಭಾರತೀಯರು ಅಕ್ರಮವಾಗಿ ನೆಲೆಸಿದ್ದಾರೆ ಎಂದೆನ್ನಲಾಗಿದೆ. ಮೆಕ್ಸಿಕೊ ಮತ್ತು ಎಲ್‌ ಸಾಲ್ವಾಡರ್‌ ನಂತರ ಮೂರನೇ ಅತಿ ಹೆಚ್ಚು ಇಂಥ ಜನರಿರುವವರು ಭಾರತೀಯರೇ’ ಎಂದಿದ್ದಾರೆ.

‘2020ರ ಅಕ್ಟೋಬರ್‌ನಿಂದ ಅಮೆರಿಕದ ಗಡಿ ಭದ್ರತಾ ಪಡೆಯು ಕೆನಡಾ ಅಥವಾ ಮೆಕ್ಸಿಕೊ ಗಡಿಯಿಂದ ಬಂದ ಸುಮಾರು 1.70 ಲಕ್ಷ ಭಾರತೀಯರನ್ನು ಗಡೀಪಾರು ಮಾಡಿತ್ತು’ ಎಂದು ತರೂರ್ ಹೇಳಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫೆ. 12 ಮತ್ತು 13ರಂದು ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಅದಕ್ಕೂ ಮುಂಚೆಯೇ ಅಕ್ರಮವಾಗಿ ನೆಲೆಸಿದ ಆರೋಪದಡಿ ಭಾರತೀಯರನ್ನು ಗಡೀಪಾರು ಮಾಡಲಾಗಿದೆ.

ಅಮೆರಿಕ ವಾಯು ಸೇನೆಗೆ ಸೇರಿದ ಸಿ–17 ಗ್ಲೋಬ್‌ಸ್ಟರ್‌ ವಿಮಾನದಲ್ಲಿ ಭಾರತೀಯರನ್ನು ಹೊತ್ತ ವಿಮಾನ ಟೆಕ್ಸಾಸ್‌ನಿಂದ ಪಂಜಾಬ್‌ಗೆ ಬಂದಿಳಿದಿದೆ.

ಅಮೆರಿಕದ ಕ್ರಮದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಭಾರತೀಯರನ್ನು ಘನತೆಯಿಂದ ಕರೆತರಲು ಪ್ರಧಾನಿ ನರೇಂದ್ರ ಮೋದಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.