ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ
ಬೆಂಗಳೂರು: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ದೆಹಲಿ ಮನೆಯಲ್ಲಿ ಇತ್ತೀಚೆಗೆ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಈ ವೇಳೆ ಅವರ ಮನೆಯಲ್ಲಿ ಶಂಕಾಸ್ಪದ ಅಪಾರ ಪ್ರಮಾಣದ ನೋಟಿನ ಕಂತೆಗಳು ಪತ್ತೆಯಾಗಿವೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದರು.
ಈ ಪ್ರಕರಣ ಇದೀಗ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಏತನ್ಮಧ್ಯೆ ಸುಪ್ರಿಂಕೋರ್ಟ್ ಕೊಲಿಜಿಯಂ ಸಮಿತಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿದೆ.
ಕೊಲಿಜಿಯಂ ಸಮಿತಿ ಹಾಗೂ ಕೇಂದ್ರ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ತನಿಖೆ ನಡೆಸಲು ನಿರ್ಧರಿಸಿದೆ. ವಶಪಡಿಸಿಕೊಂಡ ಹಣ ಎಷ್ಟು ಎಂಬುದು ಬಹಿರಂಗವಾಗಿಲ್ಲ.
ಮಾರ್ಚ್ 14 ರಂದು ಬೆಳಿಗ್ಗೆ 11.30ಕ್ಕೆ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ದೆಹಲಿಯ ನ್ಯಾಯಾಂಗ ಬಡಾವಣೆಯ ನಿವಾಸದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಬೆಂಕಿ ನಂದಿಸಲು ಹೋಗಿದ್ದ ಅಗ್ನಿಶಾಮಕ ಸಿಬ್ಬಂದಿಗೆ ಕಂತೆ ಕಂತೆ ನೋಟುಗಳು ಆ ನಿವಾಸದಲ್ಲಿ ಪತ್ತೆಯಾಗಿದ್ದವು. ಆ ವೇಳೆ ಯಶವಂತ್ ವರ್ಮಾ ಅವರು ಮನೆಯಲ್ಲಿರಲಿಲ್ಲ ಎಂದು ತಿಳಿದು ಬಂದಿದೆ.
2021 ರಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಅಲಹಾಬಾದ್ ಹೈಕೋರ್ಟ್‌ನಿಂದ ದೆಹಲಿ ಹೈಕೋರ್ಟ್‌ಗೆ ವರ್ಗಾವಣೆ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.