ADVERTISEMENT

ಪ್ಲಾಸ್ಮಾ ಥೆರಪಿ ಪರಿಣಾಮದ ಬಗ್ಗೆ ಹೆಚ್ಚಿನ ಪ್ರಯೋಗ ಅಗತ್ಯ: ತಜ್ಞರು

ಪಿಟಿಐ
Published 4 ಮೇ 2020, 18:33 IST
Last Updated 4 ಮೇ 2020, 18:33 IST

ನವದೆಹಲಿ: ಪ್ಲಾಸ್ಮಾ ಥೆರಪಿ ಕೋವಿಡ್‌–19 ಗುಣಪಡಿಸಲು ಇರುವ ‘ಅಸ್ತ್ರ’ವಲ್ಲ. ಈ ಚಿಕಿತ್ಸೆಯ ಪರಿಣಾಮದ ಬಗ್ಗೆ ಇನ್ನಷ್ಟು ಹೆಚ್ಚಿನ ಪ್ರಯೋಗಗಳು ಅಗತ್ಯ ಎಂದು ವೈದ್ಯಕೀಯ ಕ್ಷೇತ್ರದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಹಲವು ರಾಜ್ಯಗಳಲ್ಲಿ ಕೋವಿಡ್‌–19 ರೋಗಿಗಳ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿಯನ್ನು ಬಳಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಕೋವಿಡ್‌–19ನಿಂದ ಗುಣಮುಖರಾಗಿರುವ ರೋಗಿಗಳ ರಕ್ತದಿಂದ ರೋಗನಿರೋಧಕ ಕಣಗಳನ್ನು (ಆ್ಯಂಟಿಬಾಡಿಸ್‌) ತೆಗೆದು, ಸೋಂಕಿನಿಂದ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿರುವ ರೋಗಿಯ ರಕ್ತಕ್ಕೆ ಸೇರಿಸಲಾಗುತ್ತದೆ. ಇದರಿಂದ ರೋಗಿಯ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈ ಚಿಕಿತ್ಸೆ ಕೇವಲ ಪ್ರಾಯೋಗಿಕವಷ್ಟೇ, ಇದರಿಂದ ಅಪಾಯವೂ ಎದುರಾಗಬಹುದು ಎಂದು ಕಳೆದ ವಾರವಷ್ಟೇ ಕೇಂದ್ರ ಆರೋಗ್ಯ ಸಚಿವಾಲಯವು ಎಚ್ಚರಿಸಿತ್ತು.

ಹೀಗಿದ್ದರೂ, ರಾಜಸ್ಥಾನ, ಪಂಜಾಬ್‌, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಕೆಲ ರಾಜ್ಯಗಳು ಪ್ಲಾಸ್ಮಾ ಥೆರಪಿ ಮುಂದುವರಿಸುತ್ತಿವೆ. ‘ಈ ಚಿಕಿತ್ಸೆಯಿಂದ ಕೋವಿಡ್‌–19 ಚಿಕಿತ್ಸೆಯಲ್ಲಿ ‘ಹೆಚ್ಚಿನ ಬದಲಾವಣೆ’ಯಾಗುತ್ತದೆ ಎಂದು ನಿರೀಕ್ಷಿಸುವುದು ತಪ್ಪು. ಈವರೆಗೆ ಕೆಲವೇ ಪ್ರಯೋಗಗಳು ನಡೆದಿದ್ದು, ಕೆಲ ರೋಗಿಗಳಷ್ಟೇ ಚೇತರಿಸಿಕೊಂಡಿದ್ದಾರೆ’ ಎಂದು ದೆಹಲಿ ಏಮ್ಸ್‌ನ ನಿರ್ದೇಶಕ ರಣ್‌ದೀಪ್‌ ಗುಲೇರಿಯಾ ತಿಳಿಸಿದರು.

ADVERTISEMENT

‘ಪ್ಲಾಸ್ಮಾ ಥೆರಪಿ ಚಿಕಿತ್ಸೆಯ ಒಂದು ಭಾಗವಷ್ಟೇ. ಇದರಿಂದ ರೋಗಿಯ ರೋಗನಿರೋಧಕ ಶಕ್ತಿ ಹೆಚ್ಚಾಗಿ, ವೈರಸ್‌ಗಳ ವಿರುದ್ಧ ಹೋರಾಡುತ್ತವೆ. ಆದರೆ ಈ ಚಿಕಿತ್ಸೆ ಪಡೆದ ತಕ್ಷಣವೇ ಸೋಂಕು ಗುಣಮುಖವಾಗುತ್ತದೆ ಎಂದಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.