ಕರ್ನಲ್ ಸೋಫಿಯಾ ಖುರೇಷಿ
ಪಪಿಟಿಐ ಚಿತ್ರ
ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭ ದೆಶದ ಗಮನ ಸೆಳೆದಿದ್ದ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಮಧ್ಯ ಪ್ರದೇಶದ ಸಚಿವ ವಿಜಯ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಶಾ ಹೇಳಿಕೆಯು ಪ್ರತ್ಯೇಕತಾವಾದಿ ಭಾವನೆಯನ್ನು ಹೇರುತ್ತದೆ ಮತ್ತು ದೇಶದ ಏಕತೆಗೆ ಬೆದರಿಕೆಯಾಗಿದೆ ಎಂದು ಕಾಂಗ್ರೆಸ್ ನಾಯಕಿ ಜಯಾ ಭಟ್ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
'ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಭಯೋತ್ಪಾದಕರಿಗೆ ಸಹೋದರಿ ಎಂಬ ರೀತಿ ಕರ್ನಲ್ ಸೋಫಿಯಾ ಖುರೇಶಿ ಬಗ್ಗೆ ಸಚಿವರು ನೀಡಿದ ಹೇಳಿಕೆಯು ಮುಸ್ಲಿಂ ಸಮುದಾಯದವರ ಮೇಲೆ ಪ್ರತ್ಯೇಕತಾವಾದಿ ಭಾವನೆಯ ಹೇರಿಕೆಯಾಗಿದೆ. ಇದು ಭಾರತದ ಸಾರ್ವಭೌಮತ್ವ ಅಥವಾ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುತ್ತದೆ. ಸಚಿವರ ಆ ಭಾಷಣವು ಭಾರತದ ಸಂವಿಧಾನದ ಪರಿಚ್ಛೇದ 3ರ ಅಡಿಯಲ್ಲಿ ಬರುವ ಪ್ರಮಾಣವಚನ ನಿಯಮವನ್ನು ನೇರವಾಗಿ ಉಲ್ಲಂಘಿಸುತ್ತದೆ’ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಇದೇವೇಳೆ, ಸುಪ್ರೀಂ ಕೋರ್ಟ್‌ನ ಆದೇಶದ ಅನುಸಾರ ಮಧ್ಯಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಸ್ಥಿತಿ ವರದಿಯನ್ನು ನ್ಯಾಯಪೀಠ ಕೇಳಿದೆ.
ಮೇ 19ರಂದು ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್, ಅವರ ವಿರುದ್ಧ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳ ತನಿಖೆಗೆ ಎಸ್‌ಐಟಿ ರಚಿಸಲು ಆದೇಶಿಸಿತ್ತು.
ಸೋಫಿಯಾ ಕುರಿತಂತೆ ಶಾ ನೀಡಿದ್ದ ಹೇಳಿಕೆ ವಿಡಿಯೊ ವ್ಯಾಪಕವಾಗಿ ಹರಿದಾಡಿತ್ತು. ಈ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.