ADVERTISEMENT

ಜ.26ರಿಂದ ಮನೆ ಮನೆಗೆ ರಾಹುಲ್ ಗಾಂಧಿ ಕಳುಹಿಸುವ ಪತ್ರದಲ್ಲಿ ಏನಿದೆ?

ಪಿಟಿಐ
Published 15 ಜನವರಿ 2023, 0:29 IST
Last Updated 15 ಜನವರಿ 2023, 0:29 IST
 ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ‘ದೇಶದ ವಿಭಜಕ ಶಕ್ತಿಗಳು ನಮ್ಮ ವೈವಿಧ್ಯತೆಯನ್ನು ನಮ್ಮ ವಿರುದ್ಧವೇ ತಿರುಗಿಸಲು ಪ್ರಯತ್ನಿಸುತ್ತಿವೆ. ಆದರೆ, ಭಾರತವು ದ್ವೇಷವನ್ನು ತಿರಸ್ಕರಿಸುತ್ತದೆ ಮತ್ತು ದುರಾಚಾರವನ್ನು ಇನ್ನುಮುಂದೆ ಮುಂದುವರಿಸಲು ಸಾಧ್ಯವಿಲ್ಲ’ಎಂದು ಭಾರತ್ ಜೋಡೊ ಯಾತ್ರೆ ನಂತರ ಪಕ್ಷದ ಮುಂದಿನ ಅಭಿಯಾನದ ಭಾಗವಾಗಿ ಮನೆ ಮನೆಗೆ ಕಳುಹಿಸಲು ಉದ್ದೇಶಿಸಿರುವ ಪತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಗಾಂಧಿಯವರ ಪತ್ರದ ಜೊತೆಗೆ, ಪಕ್ಷದ ಕಾರ್ಯಕರ್ತರು ಜನವರಿ 26ರಿಂದ ಮಾರ್ಚ್ 26ರವರೆಗೆ ಬ್ಲಾಕ್, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನಡೆಯಲಿರುವ 'ಹಾಥ್ ಸೆ ಹಾಥ್ ಜೋಡೊ ಅಭಿಯಾನ'ದ ಭಾಗವಾಗಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆರೋಪಗಳ ಪಟ್ಟಿಯನ್ನು ಸಹ ವಿತರಿಸಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

‘2.5 ಲಕ್ಷ ಗ್ರಾಮ ಪಂಚಾಯಿತಿಗಳು, ಆರು ಲಕ್ಷ ಗ್ರಾಮಗಳು ಮತ್ತು ಸುಮಾರು 10 ಲಕ್ಷ ಚುನಾವಣಾ ಬೂತ್‌ಗಳನ್ನು ಈ ಅಭಿಯಾನದ ವ್ಯಾಪ್ತಿಗೆ ತರಲಾಗುವುದು’ ಎಂದು ಹೇಳಿದ ಅವರು, ಹಿಂದೆಂದೂ ಕಾಂಗ್ರೆಸ್ ಈ ಪ್ರಮಾಣದಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರಲಿಲ್ಲ ಎಂದಿದ್ದಾರೆ.

ADVERTISEMENT

ಪ್ರತಿ ರಾಜ್ಯ ರಾಜಧಾನಿಯಲ್ಲಿ 'ಮಹಿಳಾ ಯಾತ್ರೆ', ಬ್ಲಾಕ್ ಮಟ್ಟದಲ್ಲಿ ಪಾದಯಾತ್ರೆಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಸಮಾವೇಶಗಳು ನಡೆಯಲಿದ್ದು, ಇದರಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ರಮೇಶ್ ಹೇಳಿದ್ದಾರೆ

ಇದೇವೇಳೆ, ಜನರಿಗೆ ವಿತರಿಸಲಾಗುವ ಪತ್ರವನ್ನು ಜೈರಾಮ್ ರಮೇಶ್ ಬಿಡುಗಡೆ ಮಾಡಿದರು.

ರಾಹುಲ್ ಗಾಂಧಿ ಬರೆದಿರುವ ಪತ್ರದಲ್ಲಿ ಏನಿದೆ?

‘ಈ ಐತಿಹಾಸಿಕ 3,500 ಕಿ.ಮೀ ಭಾರತ್ ಜೋಡೊ ಯಾತ್ರೆ ಪೂರ್ಣಗೊಂಡ ಬಳಿಕ ನಾನು, ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಈ ಯಾತ್ರೆಯಲ್ಲಿ ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ ಲಕ್ಷಾಂತರ ಮಂದಿ ನನ್ನ ಜೊತೆ ನಡೆದಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕ ನನ್ನ ಮೇಲೆ ತೋರಿರುವ ಪ್ರೀತಿ, ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ’ ಎಂದಿದ್ದಾರೆ.

‘ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ನಿರುದ್ಯೋಗ, ಸಹಿಸಲು ಅಸಾಧ್ಯವಾದ ಬೆಲೆ ಏರಿಕೆ, ಕೃಷಿ ಉತ್ಪಾದನೆಯಲ್ಲಿ ಗಂಭೀರ ಕುಸಿತ, ದೇಶದ ಸಂಪೂರ್ಣ ಸಂಪತ್ತು ಕಾರ್ಪೊರೇಟ್ ಕಪಿಮುಷ್ಠಿಯಲ್ಲಿದೆ ಎಂದು ರಾಹುಲ್ ಹೇಳಿದರು. ಇಂದು, ಬಹುತ್ವವು ಸಹ ಅಪಾಯದಲ್ಲಿದೆ. ವಿಭಜಕ ಶಕ್ತಿಗಳು ನಮ್ಮ ವೈವಿಧ್ಯತೆಯನ್ನು ನಮ್ಮ ವಿರುದ್ಧ ತಿರುಗಿಸಲು ಪ್ರಯತ್ನಿಸುತ್ತಿವೆ. ವಿವಿಧ ಧರ್ಮಗಳು, ಸಮುದಾಯಗಳು, ಪ್ರದೇಶಗಳನ್ನು ಪರಸ್ಪರ ಎತ್ತಿ ಕಟ್ಟಲಾಗಿದೆ. ಯಾವಾಗ ಈ ಶಕ್ತಿಗಳಿಗೆ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತೇವೆಂಬ ಆತಂಕ ಬರುತ್ತದೋ ಹಾಗೆಲ್ಲ. ದ್ವೇಷದ ವಿಷಬೀಜ ಬಿತ್ತುತ್ತವೆ. ಈ ದುರಾಚಾರದ ಅಜೆಂಡಾಗಳಿಗೆ ಮಿತಿ ಇದೆ. ಇದು ದೀರ್ಘಾವಧಿಗೆ ಮುಂದುವರಿಯುವುದಿಲ್ಲ ಎಂಬುದು ನನಗೆ ಅರ್ಥವಾಗಿದೆ’ ಎಂದು ಅವರು ಪತ್ರದಲ್ಲಿ ಹೇಳಿದ್ಧಾರೆ.

‘ಬೀದಿಯಿಂದ ಸಂಸತ್ತಿನವರೆಗೆ ಪ್ರತಿ ದಿನ ಈ ಪಿಡುಗುಗಳನ್ನು ತೊಡೆದುಹಾಕಲು ಪ್ರಯತ್ನಿಸುತ್ತೇವೆ’ ಎಂದು ಗಾಂಧಿ ಪ್ರತಿಜ್ಞೆ ಮಾಡಿದ್ದಾರೆ.

'ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ, ನಮ್ಮ ಯುವಕರಿಗೆ ಉದ್ಯೋಗ, ನ್ಯಾಯ ಸಮ್ಮತವಾಗಿ ದೇಶದ ಸಂಪತ್ತಿನ ಹಂಚಿಕೆ, ಉದ್ಯಮಿಗಳು ಮತ್ತು ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಬೇಕಾದ ವಾತಾವರಣ ಸೃಷ್ಟಿ, ಕೈಗೆಟುಕುವ ಬೆಲೆಯಲ್ಲಿ ಡೀಸೆಲ್, ರೂಪಾಯಿ ಮೌಲ್ಯ ಚೇತರಿಕೆ, ₹500 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್ ನೀಡುವ ಮೂಲಕ ದೇಶದ ಪ್ರತಿಯೊಬ್ಬರಿಗೂ ಆರ್ಥಿಕ ಸಮೃದ್ಧತೆ ವಾತಾವರಣ ಸೃಷ್ಟಿಗೆ ನಿಶ್ಚಯಿಸಿದ್ದೇನೆ’ ಎಂದು ಪತ್ರದಲ್ಲಿ ಭರವಸೆ ನೀಡಿದ್ದಾರೆ.

‘ದ್ವೇಷ ಹರಡುವಿಕೆಯನ್ನು ದೇಶ ತಿರಸ್ಕರಿಸುತ್ತದೆ ಎಂಬುದನ್ನು ನಾನು ಪ್ರಬಲವಾಗಿ ನಂಬುತ್ತೇನೆ. ಸಮಾಜದಲ್ಲಿ ಸಂಘರ್ಷ ಸೃಷ್ಟಿಸುವ ಎಲ್ಲ ಜಾತಿ, ಧರ್ಮ, ಭಾಷೆ, ಲಿಂಗ, ಮತ್ತು ಇನ್ನಿತರ ವಿಷಯಗಳನ್ನು ಮೀರಿ ನಾವು ಬೆಳೆಯುತ್ತೇವೆ. ವಿವಿಧತೆಯಲ್ಲಿ ಏಕತೆಯೇ ನಮ್ಮ ಹೆಗ್ಗಳಿಕೆಯಾಗಿದೆ’ ಎಂದಿದ್ದಾರೆ.

ರಾಹುಲ್ ಗಾಂಧಿಯವರ ‘ಡರೋ ಮತ್ (ಭಯಪಡಬೇಡಿ)’ ಎಂಬ ಸಂದೇಶವೂ ಪತ್ರದ ಭಾಗವಾಗಿದೆ. ಅದರಲ್ಲಿ ಅವರು ಈ ಯಾತ್ರೆಯು ಎಲ್ಲರಿಗಾಗಿ ಹೋರಾಡುವ ನನ್ನ ಚೈತನ್ಯವನ್ನು ಮತ್ತಷ್ಟು ಹೆಚ್ಚಿಸಿದೆ ಮತ್ತು ಅದು ನನ್ನ ತಪಸ್ಸು ಎಂದು ಹೇಳಿದ್ದಾರೆ.

‘ನನ್ನ ವೈಯಕ್ತಿಕ ಮತ್ತು ರಾಜಕೀಯ ಪ್ರಯಾಣ ಒಂದೇ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಧ್ವನಿ ಇಲ್ಲದವರಿಗೆ ಧ್ವನಿ ನೀಡುವುದು, ದುರ್ಬಲರ ಅಸ್ತ್ರವಾಗುವುದು, ಭಾರತವನ್ನು ಕತ್ತಲೆಯಿಂದ ಬೆಳಕಿನೆಡೆಗೆ, ದ್ವೇಷದಿಂದ ಪ್ರೀತಿಯೆಡೆಗೆ, ದುಃಖದಿಂದ ಸಮೃದ್ಧಿಯತ್ತ ಕೊಂಡೊಯ್ಯಲು ನಾನು ಮುಂದೆ ಸಾಗುತ್ತೇನೆ. ನಮ್ಮ ಅಸಾಧಾರಣ ಸಂವಿಧಾನವನ್ನು ನಮಗೆ ನೀಡಿದವರ ದೃಷ್ಟಿಕೋನ ಮತ್ತು ಮೌಲ್ಯಗಳನ್ನು ಮುಂದುವರಿಸುತ್ತೇನೆ’ ಎಂದು ಗಾಂಧಿ ತಿಳಿಸಿದ್ದಾರೆ.

'ಹಾಥ್ ಸೆ ಹಾಥ್ ಜೋಡೊ ಅಭಿಯಾನ'ದ ಮೂಲಕ ಕಾಂಗ್ರೆಸ್ ಪಕ್ಷವು ನಿಮಗೆ ತನ್ನ ಕೈಯನ್ನು ಚಾಚುತ್ತಿದೆ. ಕೈ ನೀಡಿ, ದೇಶವನ್ನು ಸ್ವರ್ಣಮಯ ಭಾರತ ನಿರ್ಮಾಣದ ಹಾದಿಯಲ್ಲಿ ಮರಳಿ ತರಲು ಒಗ್ಗೂಡಿ ಎಂದು ಅವರು ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.