ADVERTISEMENT

ಸಂಪುಟ ಪುನಾರಚನೆ ವದಂತಿ: ಸಚಿವರ ಜತೆ ಮೋದಿ ಪರಿಶೀಲನಾ ಸಭೆ

ಪಿಟಿಐ
Published 11 ಜೂನ್ 2021, 14:58 IST
Last Updated 11 ಜೂನ್ 2021, 14:58 IST
ಪ್ರಧಾನಿ ನರೇಂದ್ರಮೋದಿ: ಪಿಟಿಐ ಚಿತ್ರ
ಪ್ರಧಾನಿ ನರೇಂದ್ರಮೋದಿ: ಪಿಟಿಐ ಚಿತ್ರ   

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಆಗಿರುವ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವರೊಂದಿಗೆ ವೈಯಕ್ತಿಕವಾಗಿ ಸಭೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ಮೂಲಗಳು ತಿಳಿಸಿವೆ.

ಅಂತಹ ಮೂರು ಸಭೆಗಳನ್ನು ಈವರೆಗೆ 7 ಲೋಕ ಕಲ್ಯಾಣ ಮಾರ್ಗ್‌ನಲ್ಲಿ ನಡೆಸಲಾಗಿದೆ ಎಂದು ಪ್ರಧಾನಮಂತ್ರಿಯ ಅಧಿಕೃತ ನಿವಾಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಕೂಡ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

ಬಹುತೇಕ ಎಲ್ಲಾ ಸಭೆಗಳು ಐದು ಗಂಟೆಗಳಿಗಿಂತ ಹೆಚ್ಚು ಕಾಲ ನಡೆದಿದ್ದು, ಕೋವಿಡ್-19 ರ ಎರಡನೇ ಅಲೆ ಆರಂಭವಾದ ನಂತರ ಈ ಸಭೆಗಳನ್ನು ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಇಲ್ಲಿಯವರೆಗೆ, ಗ್ರಾಮೀಣಾಭಿವೃದ್ಧಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ, ಬುಡಕಟ್ಟು ವ್ಯವಹಾರಗಳು, ನಗರಾಭಿವೃದ್ಧಿ, ಸಂಸ್ಕೃತಿ, ಅಂಕಿ ಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ, ನಾಗರಿಕ ವಿಮಾನಯಾನ, ರೈಲ್ವೆ, ಜಲ್ ಶಕ್ತಿ, ಪೆಟ್ರೋಲಿಯಂ, ಸ್ಟೀಲ್ ಮತ್ತು ಪರಿಸರ, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಉಸ್ತುವಾರಿ ವಹಿಸಿಕೊಂಡಿರುವ ಸಚಿವರು ಮತ್ತು ರಾಜ್ಯ ಸಚಿವರ ಜತೆ ಸಭೆ ನಡೆದಿದೆ.

ಈ ಸಭೆಗಳು ಇನ್ನೂ ಕೆಲ ದಿನಗಳವರೆಗೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಕ್ಯಾಬಿನೆಟ್ ಸಭೆ ಸಾಮಾನ್ಯವಾಗಿ ವಾರಕ್ಕೊಮ್ಮೆ ಮತ್ತು ಮಂತ್ರಿಗಳ ಕೌನ್ಸಿಲ್ ತಿಂಗಳಿಗೊಮ್ಮೆ ನಡೆಯುತ್ತದೆ. ಪ್ರತಿ ಬುಧವಾರ ವರ್ಚುವಲ್ ಕ್ಯಾಬಿನೆಟ್ ಸಭೆ ನಡೆಯುತ್ತಿದೆ.

ಕೇಂದ್ರ ಸಚಿವರೊಂದಿಗಿನ ಈ ಸಭೆಗಳಿಗೆ ಮುಂಚಿತವಾಗಿ ಮೋದಿಯವರು ಬಿಜೆಪಿಯ ವಿವಿಧ ವಿಭಾಗಗಳ ಅಧ್ಯಕ್ಷರು ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿಗಳೊಂದಿಗೆ ನಡೆಸಿದರು. ಎರಡೂ ಸಭೆಗಳು ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ನಡೆದಿವೆ.

ಪಕ್ಷದ ಪದಾಧಿಕಾರಿಗಳೊಂದಿಗೆ ಪ್ರಧಾನಿ ನಡೆಸಿದ ಸಭೆಗಳಲ್ಲಿ ನಡ್ಡಾ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಉಪಸ್ಥಿತರಿದ್ದರು.

ಸಂಪುಟ ಪುನಾರಚನೆ?: ಇತ್ತ, ಕೇಂದ್ರ ಸಚಿವ ಸಂಪುಟಪುನಾರಚನೆಯ ಬಗ್ಗೆ ಊಹಾಪೋಹಗಳು ಎದ್ದಿರುವಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರೊಂದಿಗೆ ಶುಕ್ರವಾರ ಮಾತುಕತೆ ನಡೆಸಿದರು. 2019 ರ ಮೇನಲ್ಲಿ ಸತತ ಎರಡನೇ ಬಾರಿಗೆ ಸರ್ಕಾರ ರಚಿಸಿದ ನಂತರ ಸಂಪುಟ ಪುನಾರಚನೆ ಆಗಿಲ್ಲ. ಆದರೆ, ಸಂಪುಟ ಪುನಾರಚನೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.