ADVERTISEMENT

ಪ್ರಧಾನಿ ಅಧೀನದಲ್ಲಿ ಸೇನೆ ಕಾರ್ಯ: ಇಮ್ರಾನ್‌ ಖಾನ್

ಪಿಟಿಐ
Published 19 ಡಿಸೆಂಬರ್ 2020, 16:35 IST
Last Updated 19 ಡಿಸೆಂಬರ್ 2020, 16:35 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ಇಸ್ಲಾಮಾಬಾದ್‌: ರಾಷ್ಟ್ರದ ರಾಜಕೀಯ ಹಾಗೂ ಚುನಾವಣೆಗಳಲ್ಲಿ ಸೇನೆಯು ಮಧ್ಯಪ್ರವೇಶಿಸುತ್ತಿದೆ ಎನ್ನುವ ವಿರೋಧ ಪಕ್ಷಗಳ ಆರೋಪಗಳ ಬೆನ್ನಲ್ಲೇ, ‘ಸೇನೆಯು ರಾಷ್ಟ್ರ ಸಂಸ್ಥೆಯಾಗಿದ್ದು, ಅದು ನನ್ನ ಆಡಳಿತದಡಿ ಕಾರ್ಯನಿರ್ವಹಿಸುತ್ತದೆ’ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಪ್ರತಿಪಾದಿಸಿದ್ದಾರೆ.

11 ವಿರೋಧ ಪಕ್ಷಗಳು ಜೊತೆಯಾಗಿ ರಚಿಸಿರುವ ‘ಪಾಕಿಸ್ತಾನ್‌ ಡೆಮಾಕ್ರಟಿಕ್‌ ಮೂವ್‌ಮೆಂಟ್‌’(ಪಿಡಿಎಂ), ಇಮ್ರಾನ್‌ ಖಾನ್‌ ಪದತ್ಯಾಗ ಹಾಗೂ ರಾಜಕೀಯದಲ್ಲಿ ಸೇನೆಯ ಮಧ್ಯಪ್ರವೇಶವನ್ನು ನಿಲ್ಲಬೇಕು ಎಂದು ಆಗ್ರಹಿಸಿ ಕಳೆದ ಸೆಪ್ಟೆಂಬರ್‌ನಿಂದ ರ್‍ಯಾಲಿಗಳನ್ನು ಆಯೋಜಿಸುತ್ತಿದೆ. 2018ರ ಚುನಾವಣೆಯಲ್ಲಿ ಕುತಂತ್ರದ ಮುಖಾಂತರ ಕೈಗೊಂಬೆಯಾಗಿರುವ ಇಮ್ರಾನ್‌ ಖಾನ್‌ ಅವರನ್ನು ಪ್ರಧಾನಿ ಹುದ್ದೆಯಲ್ಲಿ ಸೇನೆಯು ಇರಿಸಿದೆ ಎಂದು ಪಿಡಿಎಂ ಆರೋಪಿಸುತ್ತಲೇ ಬಂದಿದೆ. ಈ ಎಲ್ಲ ಆರೋಪಗಳನ್ನು ಸೇನೆಯು ತಳ್ಳಿ ಹಾಕಿದೆ. ಜೊತೆಗೆ 2018ರ ಚುನಾವಣೆಯಲ್ಲಿ ಗೆಲ್ಲಲು ಸೇನೆಯು ಸಹಕರಿಸಿದೆ ಎನ್ನುವ ಆರೋಪವನ್ನೂ ಖಾನ್‌ ನಿರಾಕರಿಸಿದ್ದಾರೆ.

‘ವಿಪಕ್ಷಗಳಿಗೆ ಸರ್ಕಾರದ ಜೊತೆ ಮಾತುಕತೆ ಬೇಕಾಗಿಲ್ಲ. ಬದಲಾಗಿ ಇದೀಗ ಸೇನೆಯ ಮೇಲೆ ಒತ್ತಡ ಹೇರಿ ಪ್ರಜಾಪ್ರಭುತ್ವ ಸರ್ಕಾರವನ್ನು ಕೆಡವಲು ಯತ್ನಿಸುತ್ತಿದೆ. ಇದನ್ನು ದ್ರೋಹ ಎನ್ನಬಹುದು. ಅವರ ಮೇಲಿರುವ ಎಲ್ಲ ಪ್ರಕರಣಗಳನ್ನು ರದ್ದುಗೊಳಿಸಬೇಕು ಎನ್ನುವುದಷ್ಟೇ ಇದರ ಹಿಂದಿನ ಉದ್ದೇಶ’ ಎಂದು ‘ಸಮ್ಮಾ ಟಿವಿ’ ಜೊತೆಗಿನ ಸಂದರ್ಶನದಲ್ಲಿ ಖಾನ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.