ADVERTISEMENT

ನವಭಾರತಕ್ಕೆ ಮೋದಿ ಸೂತ್ರ: ಮೂಲಸೌಕರ್ಯಕ್ಕೆ ₹100 ಲಕ್ಷ ಕೋಟಿ

ಎಲ್ಲ ರಕ್ಷಣಾ ಪಡೆಗಳಿಗೆ ಒಬ್ಬ ಮುಖ್ಯಸ್ಥನ ನೇಮಕ: ಮೂಲಸೌಕರ್ಯಕ್ಕೆ ₹100 ಲಕ್ಷ ಕೋಟಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 19:18 IST
Last Updated 15 ಆಗಸ್ಟ್ 2019, 19:18 IST
   

ನವದೆಹಲಿ: ಮೂರೂ ರಕ್ಷಣಾ ಪಡೆಗಳಿಗೆ ಒಬ್ಬ ಮುಖ್ಯಸ್ಥರ (ಸಿಡಿಎಸ್‌) ನೇಮಕ, ಎಲ್ಲ ಮನೆಗಳಿಗೂ ಕುಡಿಯುವ ನೀರು ಕೊಡಲು ಜಲ ಜೀವನ ಮಿಷನ್‌, ಮೂಲಸೌಕರ್ಯ ಕ್ಷೇತ್ರದಲ್ಲಿ ₹100 ಲಕ್ಷ ಕೋಟಿ ಹೂಡಿಕೆ, ಪ್ಲಾಸ್ಟಿಕ್‌ ಬಳಕೆ ತಗ್ಗಿಸುವಿಕೆ ಸೇರಿದಂತೆ ವ್ಯಾಪಕ ಪರಿಣಾಮಗಳನ್ನು ಬೀರಬಹುದಾದ ಹಲವು ವಿಚಾರಗಳನ್ನು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದರು.

ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದತಿ ಮತ್ತು ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಜಮ್ಮು–ಕಾಶ್ಮೀರದ ವಿಚಾರದಲ್ಲಿ ಹಿಂದಿನ ಸರ್ಕಾರಗಳು ಕೈಗೊಂಡ ನಿರ್ಧಾರಗಳು ನಿರೀಕ್ಷಿತ ಫಲಿತಾಂಶ ಕೊಟ್ಟಿಲ್ಲ. ಹಾಗಾಗಿ, ಹೊಸದೇ ಆದ ಧೋರಣೆ ಅಗತ್ಯವಿದೆ ಎಂದರು.

ಒಂದೇ ಬಾರಿ ಬಳಸಿ ಬಿಸಾಕುವ ಪ್ಲಾಸ್ಟಿಕ್‌ ಅನ್ನು ಕೈಬಿಡಬೇಕು ಮತ್ತು ರಾಸಾಯನಿಕಗಳು ಹಾಗೂ ರಸಗೊಬ್ಬರ ಬಳಕೆ ತಗ್ಗಿಸಬೇಕು ಎನ್ನುವ ಮೂಲಕ ಪರಿಸರ ಪರ ಕಾಳಜಿ ಮೂಡಿಸಲು ಯತ್ನಿಸಿದರು.

ADVERTISEMENT

ಐತಿಹಾಸಿಕ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿ ಮಾತನಾಡಿದ ಮೋದಿ 92 ನಿಮಿಷ ಮಾತನಾಡಿದರು. ಜನಸಂಖ್ಯೆ ಏರಿಕೆಯು ಬಹುದೊಡ್ಡ ಸವಾಲಾಗಿದ್ದು ಅದರ ಬಗ್ಗೆ ಸಾಮಾಜಿಕ ಜಾಗೃತಿ ಮೂಡಬೇಕಿದೆ ಎಂದರು. ಸಣ್ಣ ಕುಟುಂಬಗಳನ್ನು ಹೊಂದಿರುವವರ ಸಾಮಾಜಿಕ ಪ್ರಜ್ಞೆಯನ್ನು ಕೊಂಡಾಡಿದರು.

ಮುಂದಿನ ಐದು ವರ್ಷಗಳಲ್ಲಿ ತಮ್ಮ ಸರ್ಕಾರ ಏನು ಮಾಡಲಿದೆ ಎಂಬುದರ ನೀಲನಕ್ಷೆಯನ್ನು ಜನರ ಮುಂದಿಡುವ ಪ್ರಯತ್ನವನ್ನೂ ಮೋದಿ ಮಾಡಿದರು. ಮೂಲಸೌಕರ್ಯಕ್ಕೆ ಒತ್ತು ನೀಡಬೇಕಿದೆ ಎನ್ನುವುದರ ಜತೆಗೆ, ದೇಶವನ್ನು ₹350 ಲಕ್ಷ ಕೋಟಿಯ ಅರ್ಥ ವ್ಯವಸ್ಥೆಯಾಗಿ ಬೆಳೆಸುವುದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ ಎಂದರು.

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು, ಅದಕ್ಕಾಗಿ ಜನ ಹೊಸ ಹೊಸ ಸ್ಥಳಗಳಿಗೆ ಪ್ರವಾಸ ಹೋಗಬೇಕು ಎಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಜತೆಗಿನ ಸಂಬಂಧ ಸಂಘರ್ಷಾತ್ಮಕವಾಗಿಯೇ ಮುಂದುವರಿಯುತ್ತಿದೆ. ಹಾಗಿದ್ದರೂ ಪ್ರಧಾನಿ ತಮ್ಮ ಭಾಷಣದಲ್ಲಿ ಆ ದೇಶದ ಹೆಸರು ಪ್ರಸ್ತಾಪಿಸಲಿಲ್ಲ. ಭಯೋತ್ಪಾದನೆಯ ವಿಚಾರವನ್ನು ಚರ್ಚಿಸುತ್ತಾ ಪರೋಕ್ಷವಾಗಿ ಆ ದೇಶವನ್ನು ಕುಟುಕಿದರು.

ಜಮ್ಮು–ಕಾಶ್ಮೀರಕ್ಕೆ ಸಂಬಂಧಿಸಿ ದಂತೆ ಕೈಗೊಂಡ ನಿರ್ಧಾರಗಳನ್ನು ಬಲವಾಗಿ ಸಮರ್ಥಿಸಿಕೊಂಡರು. ಅದಕ್ಕೆ ಸಂಬಂಧಿಸಿ ದೀರ್ಘವಾಗಿಯೇ ಮಾತನಾಡಿದರು. ಜಮ್ಮು–ಕಾಶ್ಮೀರಕ್ಕೆ ಸಂಬಂಧಿಸಿ ನಿರ್ಧಾರಗಳಿಗೆ ರಾಜಕೀಯ ವಲಯದಿಂದ ಬೆಂಬಲ ಮತ್ತು ಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ಬಹಿರಂಗವಾಗಿಯೇ ಅದನ್ನು ತೋರಿಸಿದ್ದಾರೆ, ಕೆಲವರು ಮೌನವಾಗಿದ್ದಾರೆ ಎಂದು ವಿವರಿಸಿದರು.

‘70 ವರ್ಷಗಳಲ್ಲಿ ಸಾಧ್ಯವಾಗದ್ದು ಹೊಸ ಸರ್ಕಾರ ಅಧಿಕಾರಕ್ಕೆ ಬಂದ 70 ದಿನಗಳಲ್ಲಿ ಸಾಧ್ಯವಾಯಿತು. ಸಂವಿಧಾನದ 370 ಮತ್ತು 35ಎ ವಿಧಿಗಳ ರದ್ದತಿಗೆ ಸಂಸತ್ತು ಮೂರನೇ ಎರಡರಷ್ಟು ಬಹುಮತದಿಂದ ಅನುಮೋದನೆ ನೀಡಿದೆ. ಎಲ್ಲರಿಗೂ ಈ ನಿರ್ಧಾರ ಬೇಕಿತ್ತು, ಆದರೆ ಮೊದಲ ಹೆಜ್ಜೆ ಇಡಲು ಹಿಂಜರಿಕೆ ಇತ್ತು ಎಂಬುದೇ ಇದರ ಅರ್ಥ’ ಎಂದು ಅವರು ಹೇಳಿದರು.

‘ನಿಮಗೆ ವಿಶೇಷಾಧಿಕಾರದ ವಿಚಾರದಲ್ಲಿ ಅಷ್ಟೊಂದು ಬದ್ಧತೆ ಇದ್ದಿದ್ದರೆ ತಾತ್ಕಾಲಿಕ ಎಂಬ ಅಂಶವನ್ನು ತೆಗೆದು ಕಾಯಂ ಎಂದು ಮಾಡಬಹುದಾಗಿತ್ತು. ಆದರೆ, ವಿಶೇಷಾಧಿಕಾರ ನೀಡಿದ್ದು ಸರಿಯಲ್ಲ ಎಂಬ ಭಾವನೆ ನಿಮ್ಮಲ್ಲಿ ಇತ್ತು. ಅಷ್ಟಾಗಿಯೂ ಅದನ್ನು ಬದಲಾಯಿಸುವ ಧೈರ್ಯ ನಿಮಗೆ ಇರಲಿಲ್ಲ’ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಪರೋಕ್ಷವಾಗಿ ಟೀಕಿಸಿದರು.

ಒಂದು ರಾಷ್ಟ್ರ, ಒಂದು ಸಂವಿಧಾನ ಎಂಬುದು ಈಗ ನಿಜವಾಗಿದೆ. ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಕನಸು ಸಾಕಾರದ ನಿಟ್ಟಿನಲ್ಲಿ ಇದು ಬಹುದೊಡ್ಡ ಹೆಜ್ಜೆ ಎಂದು ಅವರು ಹೇಳಿದರು.

ಸ್ವದೇಶಿ ಚಳವಳಿ...:ಭಾರತದಲ್ಲಿ ತಯಾರಾದ ವಸ್ತುಗಳನ್ನೇ ಬಳಸುವ ನಿರ್ಧಾರ ಮಾಡೋಣ. ಅದೃಷ್ಟದಾಯಕ ನಾಳೆಗಳಿಗಾಗಿ ಸ್ಥಳೀಯ ಉತ್ಪನ್ನಗಳನ್ನೇ ಬಳಸೋಣ. ಸುಂದರ ನಾಳೆಗಳಿಗಾಗಿ, ಶುಭ್ರ ನಾಳೆಗಳಿಗಾಗಿ ಸ್ಥಳೀಯ ಸರಕುಗಳನ್ನು ಬಳಸೋಣ ಎಂದರು.

ಜಲ–ಜೀವನ ಮಿಷನ್‌

ದೇಶದ ಎಲ್ಲ ಮನೆಗಳಿಗೂ ಕುಡಿಯುವ ನೀರು ಪೂರೈಸುವ ಜಲ ಜೀವನ ಮಿಷನ್‌ ಆರಂಭಿಸಲಾಗುವುದು ಎಂದು ಪ್ರಧಾನಿ ಘೋಷಿಸಿದ್ದಾರೆ. ಇದಕ್ಕಾಗಿ ₹3.5 ಲಕ್ಷ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ನೀರಿನ ಬವಣೆ ಅತಿ ಹೆಚ್ಚು ಇರುವ 256 ಜಿಲ್ಲೆಗಳಲ್ಲಿ ನೀರು ಸಂರಕ್ಷಣೆಗೆ ಸರ್ಕಾರವು ಗಮನ ಕೇಂದ್ರೀಕರಿಸಲಿದೆ. ಇದರಲ್ಲಿ ಮಳೆ ನೀರು ಸಂಗ್ರಹ, ಕೆರೆಗಳು ಮತ್ತು ಕೊಳಗಳ ನಿರ್ವಹಣೆ, ಅಂತರ್ಜಲ ಮಟ್ಟ ಏರಿಸುವಿಕೆ, ಮೇಲ್ಮೈ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಳ, ಕೃಷಿ ಜಮೀನಿನಲ್ಲಿ ತೇವಾಂಶ ಹೆಚ್ಚಳ ಮತ್ತು ಅರಣ್ಯೀಕರಣ ಸೇರಿವೆ.

ನೀರು ಸಂರಕ್ಷಣೆಗೆ ಜನ ಚಳವಳಿಯೇ ನಡೆಯಬೇಕು. ಕಳೆದ ಏಳು ದಶಕಗಳಲ್ಲಿ ಈ ನಿಟ್ಟಿನಲ್ಲಿ ನಡೆದ ಪ್ರಯತ್ನಗಳು ನಾಲ್ಕು ಪಟ್ಟು ಏರಿಕೆಯಾಗಬೇಕು ಎಂದು ಮೋದಿ ಹೇಳಿದ್ದಾರೆ.

ನಿರ್ಣಾಯಕ ಹೋರಾಟ

l ಭಯೋತ್ಪಾದನೆಯನ್ನು ಹರಡುವವರ ವಿರುದ್ಧದ ನಿರ್ಣಾಯಕ ಹೋರಾಟವನ್ನು ಭಾರತ ಮುಂದುವರಿಸಲಿದೆ.

l ಕೆಲವು ಜನರು ಭಾರತವನ್ನು ಮಾತ್ರವಲ್ಲ, ನಮ್ಮ ನೆರೆಯ ದೇಶಗಳಾದ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಅಫ್ಗಾನಿಸ್ತಾನವನ್ನೂ ಗುರಿಯಾಗಿಸಲು ಯತ್ನಿಸುತ್ತಿದ್ದಾರೆ. ನಾವು ಈ ಇಡೀ ಪ್ರದೇಶದ ಶಾಂತಿ ಮತ್ತು ಅಭಿವೃದ್ಧಿಯಲ್ಲಿ ಪಾತ್ರ ವಹಿಸಲು ಯತ್ನಿಸುತ್ತಿದ್ದೇವೆ.

ಪ್ಲಾಸ್ಟಿಕ್‌ ಬಳಕೆ ಬೇಡ

l 2014ರ ಭಾಷಣದಲ್ಲಿ ಸ್ವಚ್ಛತೆ ಬಗ್ಗೆ ಮಾತನಾಡಿದ್ದೆ. ಅದು ದೇಶವ್ಯಾಪಿ ಚಳವಳಿಯಾಯಿತು. ಸಾಮಾನ್ಯ ಜನರು ಅದನ್ನು ಕೈಗೆತ್ತಿಕೊಂಡರು. ಈ ಬಾರಿ ಇನ್ನೊಂದು ವಿನಂತಿ ಇದೆ.ಒಂದೇ ಬಾರಿ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ಜನರು ಕೈಬಿಡಬೇಕು. ಪ್ರೀತಿಯ ಬಾಪು (ಮಹಾತ್ಮ ಗಾಂಧಿ) ಅವರ ಜನ್ಮದಿನವಾದ ಅಕ್ಟೋಬರ್‌ 2ರ ಹೊತ್ತಿಗೆ ಇದು ಸಾಕಾರವಾಗಲಿ.

l ಸೆಣಬು ಮತ್ತು ಬಟ್ಟೆ ಚೀಲಗಳನ್ನುವರ್ತಕರು ಮಾರಾಟ ಮಾಡಬೇಕು. ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡುವ ವಿಧಾನಗಳನ್ನು ಗ್ರಾಹಕರು
ಅಳವಡಿಸಿಕೊಳ್ಳಬೇಕು. ಪ್ಲಾಸ್ಟಿಕ್‌ ಬಳಕೆ ತಪ್ಪಿಸಲು ಈಗ ಲಭ್ಯ ಇರುವ ತಂತ್ರಜ್ಞಾನಗಳನ್ನು ನಾವು ಬಳಸಬೇಕು.

l ನಾವೆಲ್ಲರೂ, ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಗುಂಪು ಗುಂಪಾಗಿ ಬೀದಿಗಳಲ್ಲಿ, ಚರಂಡಿಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ ಹೆಕ್ಕಿ ಒಂದೆಡೆ ಹಾಕೋಣ. ಸ್ಥಳೀಯ ಸಂಸ್ಥೆಗಳು ಈ ಪ್ಲಾಸ್ಟಿಕ್‌ ಅನ್ನು ವಿಲೇವಾರಿ ಮಾಡಲು ವ್ಯವಸ್ಥೆ ಮಾಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.