ಕೋಲ್ಕತ್ತ: ‘ಅಧಿಕಾರಕ್ಕಾಗಿ ಒಳನುಸುಳುವಿಕೆಗೆ ಉತ್ತೇಜನ ನೀಡುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದಲ್ಲಿನ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದರು.
‘ಪಶ್ಚಿಮ ಬಂಗಾಳದ ಜನಸಂಖ್ಯೆಯನ್ನು ಬದಲಾಯಿಸುತ್ತಿರುವ ಒಳನುಸುಳುಕೋರರ ವಿರುದ್ಧ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬೃಹತ್ ಅಭಿಯಾನ ಆರಂಭಿಸಿದೆ’ ಎಂದು ಉತ್ತರ 24 ಪರಗಣ ಜಿಲ್ಲೆಯ ದಮ್ ದಮ್ ಪ್ರದೇಶದಲ್ಲಿ ನಡೆದ ರ‍್ಯಾಲಿಯಲ್ಲಿ ಅವರು ಹೇಳಿದರು.
‘ದೇಶವು ಇನ್ನು ಮುಂದೆ ಒಳನುಸುಳುಕೋರರನ್ನು ಸಹಿಸುವುದಿಲ್ಲ. ಅವರು ಇಲ್ಲಿಯೇ ಉಳಿಯಲು ಅನುಮತಿಸುವುದಿಲ್ಲ. ಆದರೆ, ಟಿಎಂಸಿ ಮತ್ತು ಕಾಂಗ್ರೆಸ್ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ತುಷ್ಟೀಕರಣದ ರಾಜಕಾರಣ ನಡೆಸಿವೆ’ ಎಂದು ದೂರಿದರು.
‘ಒಳನುಸುಳುಕೋರರು ಬಂಗಾಳ ಮತ್ತು ದೇಶವನ್ನು ತೊರೆದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದರೆ, ಟಿಎಂಸಿ ನೇತೃತ್ವದ ಸರ್ಕಾರವು ಅಧಿಕಾರದಿಂದ ಕೆಳಗಿಳಿಯಬೇಕಿದೆ. ನಿಮ್ಮ ಮತ ಮಾತ್ರ ಈ ನುಸುಳುಕೋರರನ್ನು ದೇಶದಿಂದ ಹೊರಹಾಕುವುದನ್ನು ಖಚಿತಪಡಿಸುತ್ತದೆ’ ಎಂದು ಪ್ರಧಾನಿ ಹೇಳಿದರು.
‘ಒಳನುಸುಳುಕೋರರು ಆರ್ಥಿಕತೆಯ ಮೇಲೆ ಒತ್ತಡ ಹೇರುತ್ತಿದ್ದಾರೆ. ನಮ್ಮ ಸಹೋದರಿಯರು ಹಾಗೂ ತಾಯಂದಿರನ್ನು ಹಿಂಸಿಸುತ್ತಿದ್ದಾರೆ’ ಎಂದು ದೂರಿದರು.
‘ಗಡಿ ರಾಜ್ಯವು ದುರ್ಬಲವಾಗಿದೆ. ಬಂಗಾಳದ ಅಭಿವೃದ್ಧಿಗಾಗಿ ಬಿಜೆಪಿಯು ಮುಂದಾದರೆ, ಟಿಎಂಸಿಯು ಅಡ್ಡಿಪಡಿಸುತ್ತಿದೆ’ ಎಂದು ಅವರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.