ಪ್ರಧಾನಿ ನರೇಂದ್ರ ಮೋದಿ
ಸಿವಾನ್: ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಆರ್‌ಜೆಡಿ ಅವಮಾನಿಸಿದೆ ಎಂದು ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಬಿಹಾರದ ಜನರು ಅದನ್ನು ಸಹಿಸುವುದಿಲ್ಲ’ ಎಂದು ಹೇಳಿದರು.
ಬಿಹಾರದ ಸಿವಾನ್ ಜಿಲ್ಲೆಯಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಬಿಹಾರ ದೊಡ್ಡ ಪಾತ್ರ ವಹಿಸಬೇಕು ಎಂದರು.
ಮೋದಿ ಅವರು ಈ ವರ್ಷದಲ್ಲಿ ಬಿಹಾರಕ್ಕೆ ನೀಡಿದ ಐದನೇ ಭೇಟಿ ಇದಾಗಿತ್ತು. ಈ ತಿಂಗಳಲ್ಲಿ ಇದು ಅವರ ಎರಡನೇ ಭೇಟಿ. ವಂದೆ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ಸೇರಿದಂತೆ ₹5,900 ಕೋಟಿ ಮೊತ್ತದ ವಿವಿಧ ಯೋಜನೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಅಂಬೇಡ್ಕರ್ ರಾಜಪ್ರಭುತ್ವದ ವಿರೋಧಿಯಾಗಿದ್ದರು. ಆದರೆ ಆರ್‌ಜೆಡಿ ಮತ್ತು ಅದರ ಮಿತ್ರ ಪಕ್ಷಗಳಿಗೆ ಅದು ಇಷ್ಟವಿಲ್ಲ. ಹೀಗಾಗಿ ಅವರು ಬಾಬಾ ಸಾಹೇಬರ ಭಾವಚಿತ್ರವನ್ನು ತಮ್ಮ ಪಾದಗಳ ಬಳಿ ಇಟ್ಟಿದ್ದರು. ಈ ಅವಮಾನಕ್ಕಾಗಿ ಆರ್‌ಜೆಡಿ ನಾಯಕರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ಜನರು ನಡೆಸುತ್ತಿದ್ದ ಪ್ರತಿಭಟನೆಯನ್ನು ನಾನು ಇಲ್ಲಿಗೆ ಬರುವಾಗ ಗಮನಿಸಿದ್ದೇನೆ’ ಎಂದು ಅವರು ಹೇಳಿದರು.
‘ಆದರೆ, ಆರ್‌ಜೆಡಿ ನಾಯಕರು ಈ ಸಂಬಂಧ ಇಲ್ಲಿಯವರೆಗೆ ಕ್ಷಮೆಯಾಚಿಸಿಲ್ಲ. ಏಕೆಂದರೆ ಅವರು ದಲಿತರನ್ನು ತಿರಸ್ಕಾರದಿಂದ ನೋಡುತ್ತಾರೆ. ಇದಕ್ಕೆ ವ್ಯತಿರಿಕ್ತ ಎಂದರೆ, ನನ್ನ ಹೃದಯದಲ್ಲಿ ಬಾಬಾಸಾಹೇಬರು ಇದ್ದಾರೆ, ಅವರ ಭಾವಚಿತ್ರವನ್ನು ಎದೆಯ ಹತ್ತಿರ ಇಟ್ಟುಕೊಳ್ಳಲು ಬಯಸುತ್ತೇನೆ’ ಎಂದು ತಿಳಿಸಿದರು.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಹೆಸರನ್ನು ಉಲ್ಲೇಖಿಸದೆ ಮೋದಿ ಟೀಕಿಸಿದರು.
‘ಆರ್‌ಜೆಡಿ– ಕಾಂಗ್ರೆಸ್ ಪಕ್ಷಗಳ ಜನರಿಗೆ ಅವಕಾಶ ವಂಚಿತರು, ದಲಿತರು, ಹಿಂದುಳಿದ ವರ್ಗಗಳಿಗೆ ಸೇರಿದ ಜನರ ಬಗ್ಗೆ ಗೌರವವಿಲ್ಲ. ಅವರು ತಮ್ಮನ್ನು ಬಾಬಾಸಾಹೇಬರಿಗಿಂತ ಮೇಲು ಎಂದು ಪರಿಗಣಿಸುತ್ತಾರೆ. ಇದನ್ನು ಬಿಹಾರದ ಜನರು ಎಂದಿಗೂ ಕ್ಷಮಿಸಲ್ಲ ಎಂಬುದು ನೆನಪಿರಲಿ’ ಎಂದು ಪ್ರಧಾನಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.