ADVERTISEMENT

7 ವರ್ಷಗಳ ಬಳಿಕ ಮೋದಿ ಚೀನಾ ಭೇಟಿ: ತಿಯಾನ್‌ಜಿನ್‌ನಲ್ಲಿ ಇಂದಿನಿಂದ ‘SCO’ ಶೃಂಗಸಭೆ

ಪಿಟಿಐ
Published 30 ಆಗಸ್ಟ್ 2025, 23:30 IST
Last Updated 30 ಆಗಸ್ಟ್ 2025, 23:30 IST
   

ತಿಯಾನ್‌ಜಿನ್‌: ಎರಡು ದಿನಗಳ ಜಪಾನ್ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಲು ಶನಿವಾರ ಚೀನಾದ ತಿಯಾನ್‌ಜಿನ್‌ಗೆ ಬಂದಿಳಿದರು. 

ತಿಯಾನ್‌ಜಿನ್‌ ನಗರದಲ್ಲಿ ಭಾನುವಾರ ಮತ್ತು ಸೋಮವಾರ ‘ಎಸ್‌ಸಿಒ’ ಶೃಂಗಸಭೆ ನಡೆಯಲಿದೆ.

ಸುಮಾರು ಏಳು ವರ್ಷಗಳ ಬಳಿಕ ಮೋದಿ ಅವರು ಚೀನಾಕ್ಕೆ ತೆರಳಿದ್ದಾರೆ. ಪೂರ್ವ ಲಡಾಖ್‌ನ ಗಾಲ್ವನ್‌ ಕಣಿವೆಯಲ್ಲಿನ ಸಂಘರ್ಷದ ಬಳಿಕ ಭಾರತ–ಚೀನಾ ನಡುವಿನ ಸಂಬಂಧ ಹಳಸಿತ್ತು. ಸಂಬಂಧ ಸುಧಾರಣೆ ನಿಟ್ಟಿನಲ್ಲೂ ಮೋದಿ ಅವರ ಭೇಟಿ ಪ್ರಾಮುಖ್ಯ ಪಡೆದಿದೆ. 

ADVERTISEMENT

ಇನ್ನೊಂದೆಡೆ ಅಮೆರಿಕದ ಸುಂಕ ಸಮರದಿಂದ (ಶೇ 50ರಷ್ಟು ಸುಂಕ) ಮೋದಿ ಅವರು ಜಪಾನ್‌, ಚೀನಾ ಸೇರಿ ಪೂರ್ವ ಏಷ್ಯಾ ರಾಷ್ಟ್ರಗಳೊಂದಿಗೆ ಆರ್ಥಿಕ ಪಾಲುದಾರಿಕೆ ವಿಸ್ತರಿಸಲು ಆಸಕ್ತಿ ತೋರಿಸಿದ್ದಾರೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಭಾನುವಾರ ನಿಗದಿಯಾಗಿರುವ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. 

‘ಎಸ್‌ಸಿಒ’ ಶೃಂಗಸಭೆ ಸಂದರ್ಭದಲ್ಲಿ ಮೋದಿ ಅವರು ವಿವಿಧ ದೇಶಗಳ ಮುಖಂಡರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರೊಂದಿಗೂ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಪಾಶ್ಚಿಮಾತ್ಯ ದೇಶಗಳ ಪ್ರಾಬಲ್ಯದ ನ್ಯಾಟೊ ಮಿಲಿಟರಿ ಮೈತ್ರಿಕೂಟದ ವಿರುದ್ಧ, ಮಧ್ಯ ಏಷ್ಯಾದ ರಾಷ್ಟ್ರಗಳ ನಡುವಿನ ಸಂಬಂಧ ಗಾಢವಾಗಿಸುವ ನಿಟ್ಟಿನಲ್ಲಿ ರಷ್ಯಾ ಮತ್ತು ಚೀನಾಕ್ಕೂ ‘ಎಸ್‌ಸಿಒ’ ವೇದಿಕೆ ಮಹತ್ವದ್ದಾಗಿದೆ. 

ಪುಟಿನ್ ಮಾತುಕತೆ: 

ಉಕ್ರೇನ್‌ – ರಷ್ಯಾ ಸಂಘರ್ಷದ ವಿಚಾರವಾಗಿ ಮಧ್ಯಸ್ಥಿಕೆ ವಹಿಸಿದ್ದ ಟರ್ಕಿಯ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೊಗನ್‌ ಅವರೊಂದಿಗೆ ಪುಟಿನ್‌ ಮಾತುಕತೆ ನಡೆಸಲಿದ್ದಾರೆ. ಇರಾನ್‌ ಅಧ್ಯಕ್ಷ ಪೆಜೆಶ್ಕಿಯಾನ್‌ ಅವರೊಂದಿಗೆ ಟೆಹರಾನ್‌ ಪರಮಾಣು ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ರಷ್ಯಾದ ಆಡಳಿತ ಕಚೇರಿ ಕ್ರೆಮ್ಲಿನ್‌ ಹೇಳಿದೆ. 

20ಕ್ಕೂ ಹೆಚ್ಚು ದೇಶಗಳ ನಾಯಕರು ಭಾಗಿ 

ಶಾಂಘೈ ಸಹಕಾರ ಸಂಘಟನೆಯಲ್ಲಿ ಚೀನಾ, ಭಾರತ, ರಷ್ಯಾ, ಪಾಕಿಸ್ತಾನ, ಇರಾನ್‌, ಕಜಾಕಸ್ತಾನ, ಕಿರ್ಗಿಸ್ತಾನ, ತಜಿಕಿಸ್ತಾನ, ಉಜ್ಬೆಕಿಸ್ತಾನ ಮತ್ತು ಬೆಲಾರಸ್‌ ಸೇರಿ 10 ಸದಸ್ಯ ದೇಶಗಳಿವೆ. ಇದಲ್ಲದೆ 16 ದೇಶಗಳು ‘ಎಸ್‌ಸಿಒ’ನ ವೀಕ್ಷಕರು ಅಥವಾ ಸಂವಾದ ಪಾಲುದಾರ ದೇಶಗಳಾಗಿವೆ. ತಿಯಾನ್‌ಜಿನ್‌ನಲ್ಲಿ ನಡೆಯಲಿರುವ ಸಭೆಯಲ್ಲಿ 20ಕ್ಕೂ ಹೆಚ್ಚು ದೇಶಗಳ ನಾಯಕರು ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.