ನವದೆಹಲಿ: ಬಜೆಟ್ ಮೇಲಿನ ಭಾಷಣದ ವೇಳೆ ಜಾತಿ ಗಣತಿ ಕುರಿತು ಬಿಜೆಪಿ ಸಂಸದ ಅನುರಾಗ್ ಠಾಕೂರ್ ನೀಡಿದ್ದ ಹೇಳಿಕೆಗಳನ್ನು ಖಂಡಿಸಿ ವಿರೋಧ ಪಕ್ಷಗಳ ಸದಸ್ಯರು ಲೋಕಸಭೆಯಲ್ಲಿ ಬುಧವಾರ ಪ್ರತಿಭಟಿಸಿದರು.
‘ಕಡತದಿಂದ ತೆಗೆದು ಹಾಕಲಾಗಿದ್ದ, ಸಂಸದ ಠಾಕೂರ್ ಹೇಳಿಕೆಗಳನ್ನು ಒಳಗೊಂಡ ವಿಡಿಯೊವನ್ನು ‘ಎಕ್ಸ್’ನಲ್ಲಿ ಹಂಚಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಂದ ಗಂಭೀರವಾದ ಸಂಸದೀಯ ಹಕ್ಕುಚ್ಯುತಿಯಾಗಿದೆ’ ಎಂದು ಕಾಂಗ್ರೆಸ್ ಸದಸ್ಯರು ಟೀಕಿಸಿದರು.
ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆ ಜೋರಾಗುತ್ತಿದ್ದಂತೆಯೇ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಮಧ್ಯಾಹ್ನದ ವರೆಗೆ ಮುಂದೂಡಿದರು.
ಅನುರಾಗ್ ಠಾಕೂರ್ ಅವರು ಬಜೆಟ್ ಮೇಲೆ ಮಂಗಳವಾರ ಭಾಷಣ ಮಾಡುವ ವೇಳೆ, ‘ಯಾರಿಗೆ ತನ್ನ ಜಾತಿ ಯಾವುದು ಎಂಬುದು ತಿಳಿದಿಲ್ಲವೊ ಅವರು ಜಾತಿ ಗಣತಿ ಕುರಿತು ಮಾತನಾಡುತ್ತಾರೆ’ ಎಂದಿದ್ದರು.
ಠಾಕೂರ್ ಅವರ ಈ ಮಾತು ಭಾರಿ ಗದ್ದಲಕ್ಕೆ ಕಾರಣವಾಗಿತ್ತು. ಈ ಹೇಳಿಕೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಹೇಳಿದ್ದು ಎಂದು ಆರೋಪಿಸಿ ವಿರೋಧ ಪಕ್ಷಗಳ ಸದಸ್ಯರು ಮಂಗಳವಾರವೂ ಪ್ರತಿಭಟಿಸಿದ್ದರು.
ಈ ವಿಡಿಯೊ ಹಂಚಿಕೊಂಡಿದ್ದ ಪ್ರಧಾನಿ ಮೋದಿ, ‘ನನ್ನ ಉತ್ಸಾಹಿ, ಯುವ ಸಹೋದ್ಯೋಗಿ ಅನುರಾಗ್ ಠಾಕೂರ್ ಅವರ ಈ ಮಾತುಗಳನ್ನು ತಪ್ಪದೇ ಕೇಳಬೇಕು. ವಾಸ್ತವ ಸಂಗತಿಗಳು, ಹಾಸ್ಯ ಮಿಶ್ರಿತ ಅವರ ಭಾಷಣ ‘ಇಂಡಿಯಾ’ ಒಕ್ಕೂಟದ ಕೆಟ್ಟ ರಾಜಕೀಯದ ಮುಖವಾಡವನ್ನು ಕಳಚಿದೆ’ ಎಂಬ ಒಕ್ಕಣೆಯೊಂದಿಗೆ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದರು.
‘ಇಂಡಿಯಾ’ ಪ್ರತಿಭಟನೆ: ಸಂಸತ್ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೋಯಿ, ‘ಜಾತಿ ಗಣತಿ ಕುರಿತಂತೆ ಬಿಜೆಪಿ ನಾಯಕರ ಸಂವೇದನಾರಹಿತ ಮತ್ತು ಕ್ರೂರವಾದ ಹೇಳಿಕೆಗಳನ್ನು ಖಂಡಿಸಿ ‘ಇಂಡಿಯಾ’ ಒಕ್ಕೂಟ ಸದನದಲ್ಲಿ ಬುಧವಾರ ಪ್ರತಿಭಟಿಸಿತು’ ಎಂದು ಹೇಳಿದರು.
‘ಜಾತಿ ಗಣತಿ ಬಹಳ ಭಾವನಾತ್ಮಕ ವಿಚಾರ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳು ಜಾತಿ ಗಣತಿ ನಡೆಯಬೇಕು ಎಂದು ಬಯಸುತ್ತಿದ್ದರೆ, ಅವರ ಈ ಬೇಡಿಕೆಯನ್ನು ಬಿಜೆಪಿಯು ಸಂಸತ್‌ನಲ್ಲಿ ಅಣಕಿಸುತ್ತಿದೆ. ಪರಿಶಿಷ್ಟರು ಹಾಗೂ ಒಬಿಸಿಗಳನ್ನು ಬಿಜೆಪಿ ಅವಮಾನಿಸಿದೆ. ಅದೂ ಅಲ್ಲದೇ, ಠಾಕೂರ್ ಅವರ ಭಾಷಣ ಮೆಚ್ಚಿ ಪ್ರಧಾನಿ ಅದರ ವಿಡಿಯೊ ಹಂಚಿಕೊಂಡಿದ್ದು ದುರದೃಷ್ಟಕರ’ ಎಂದರು.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಸಂಸದ ಠಾಕೂರ್ ಅವರ ಭಾಷಣವನ್ನು ತಪ್ಪದೇ ಕೇಳಬೇಕು ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹವೂ ಆಗಿದೆ. ಈ ರೀತಿ ಹೇಳುವ ಮೂಲಕ ಪ್ರಧಾನಿಯವರು ಗಂಭೀರವಾದ ಹಕ್ಕುಚ್ಯುತಿಯನ್ನು ಉತ್ತೇಜಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.
ಪರಿಶಿಷ್ಟರು ಒಬಿಸಿಗಳು ಹಾಗೂ ಆದಿವಾಸಿಗಳನ್ನು ಅವಮಾನಿಸಿದ ಭಾಷಣವನ್ನು ಪ್ರಧಾನಿ ಹೊಗಳಿದ್ದಾರೆ. ಜಾತಿ ಗಣತಿ ಹಾಗೂ ಈ ಜನರ ಹಕ್ಕುಗಳಿಗಾಗಿ ನಾವು ಹೋರಾಡುತ್ತೇವೆಗೌರವ್ ಗೊಗೋಯಿ ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ
ಪರಿಶಿಷ್ಟರು ಒಬಿಸಿ ಹಾಗೂ ಮುಸ್ಲಿಮರಿಗೆ ಬಿಜೆಪಿಯವರ ಹೃದಯದಲ್ಲಿ ಸ್ಥಾನ ಇಲ್ಲ ಎಂಬುದನ್ನು ನಾವು ಹೇಳುತ್ತಲೇ ಇದ್ದೇವೆ. ಇವರಿಗೆ ಸಂಸತ್‌ನಲ್ಲಿ ಅವಮಾನಿಸಲಾಗಿದೆಧರ್ಮೇಂದ್ರ ಯಾದವ್ ಸಮಾಜವಾದಿ ಪಕ್ಷದ ಸಂಸದ
ನಮ್ಮ ಮುಂದಿರುವ ಪ್ರಶ್ನೆ ರಾಹುಲ್ ಗಾಂಧಿಯವರ ಜಾತಿ ಯಾವುದು ಎಂಬುದಲ್ಲ ಬದಲಾಗಿ ಜಾತಿ ಗಣತಿಮನೋಜ್ ಝಾ ಆರ್‌ಜೆಡಿ ರಾಜ್ಯಸಭಾ ಸಂಸದ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಕ್ಕುಚ್ಯುತಿ ಗೊತ್ತುವಳಿ ಮಂಡಿಸುವುದಾಗಿ ಕಾಂಗ್ರೆಸ್ ಸಂಸದ ಚರಣ್‌ಜಿತ್ ಸಿಂಗ್ ಚನ್ನಿ ಬುಧವಾರ ನೋಟಿಸ್ ಸಲ್ಲಿಸಿದ್ದಾರೆ. ಈ ಸಂಬಂಧ ಚನ್ನಿ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ನೋಟಿಸ್ ಸಲ್ಲಿಸಿದ್ದು ನಿಯಮ 222ರಡಿ ಪ್ರಧಾನಿ ವಿರುದ್ಧ ಹಕ್ಕುಚ್ಯುತಿ ಗೊತ್ತುವಳಿ ಮಂಡಿಸಲು ಅವಕಾಶ ನೀಡುವಂತೆ ಕೋರಿದ್ದಾರೆ.
ಬಜೆಟ್ ಮೇಲಿನ ಭಾಷಣದ ವೇಳೆ ಸಂಸದ ಅನುರಾಗ್ ಠಾಕೂರ್ ಮಂಗಳವಾರ ನೀಡಿದ್ದ ಕೆಲ ಹೇಳಿಕೆಗಳನ್ನು ಕಡತದಿಂದ ತೆಗೆದು ಹಾಕಲಾಗಿತ್ತು. ಆದಾಗ್ಯೂ ಠಾಕೂರ್ ಅವರ ಹೇಳಿಕೆಗಳನ್ನು ಒಳಗೊಂಡ ವಿಡಿಯೊವೊಂದನ್ನು ಪ್ರಧಾನಿ ಮೋದಿ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ ಎಂದು ಚನ್ನಿ ಆರೋಪಿಸಿದ್ದಾರೆ.
ಲಖನೌ: ಜಾತಿ ಕುರಿತಂತೆ ಲೋಕಸಭೆಯಲ್ಲಿ ನಡೆಯುತ್ತಿರುವ ಜಟಾಪಟಿ ನಾಟಕವಷ್ಟೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಬಿಸಿ ವಿರೋಧಿಯಾಗಿವೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಬುಧವಾರ ಹೇಳಿದ್ದಾರೆ. ‘ಈ ಎರಡೂ ಪಕ್ಷಗಳು ಒಬಿಸಿ ಸಮುದಾಯಕ್ಕೆ ಮೋಸ ಮಾಡುವ ಪ್ರಯತ್ನ ನಡೆಸಿವೆ’ ಎಂದು ‘ಎಕ್ಸ್’ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ. ‘ಜಾತಿ ಗಣತಿಯು ಸಾರ್ವಜನಿಕ ಹಿತಾಸಕ್ತಿಯ ಮಹತ್ವದ ವಿಷಯ. ಉತ್ತರ ಪ್ರದೇಶದಲ್ಲಿ ಒಬಿಸಿಗಳಿಗೆ ನಮ್ಮ ಬಿಎಸ್‌ಪಿ ಸರ್ಕಾರ ಮೀಸಲಾತಿ ಜಾರಿಗೊಳಿಸಿತ್ತು. ಇದೇ ರೀತಿ ಕೇಂದ್ರ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು’ ಎಂದೂ ಅವರು ಹೇಳಿದ್ದಾರೆ.
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜಾತಿ ಕುರಿತು ಪ್ರಶ್ನಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಇದೇ ವಿಚಾರವನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ದೇಶವನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬುಧವಾರ ಹೇಳಿದ್ಧಾರೆ.
ಸಂಸತ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಕಾಂಗ್ರೆಸ್ ನಾಯಕರು ಜನರ ಜಾತಿ ಕುರಿತು ಕಾಂಗ್ರೆಸ್ ನಾಯಕರು ದಿನವೂ ಪ್ರಶ್ನೆ ಕೇಳುತ್ತಿರುತ್ತಾರೆ’ ಎಂದು ಟೀಕಿಸಿದರು. ‘ಕಾಂಗ್ರೆಸ್ ನಾಯಕರು ಜನರ ಜಾತಿ ಪ್ರಶ್ನಿಸುವ ಮೂಲಕ ದೇಶವನ್ನು ಒಡೆಯುವ ಸಂಚು ಮಾಡುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ಅವರ ಜಾತಿ ಕುರಿತು ಮಾತು ಬಂದಾಗ ಇಷ್ಟೊಂದು ಪ್ರತಿಭಟನೆ’ ಎಂದೂ ಕುಟುಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.