ADVERTISEMENT

ಪ್ರಧಾನಿ ಹತಾಶೆಗೊಂಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ಪಿಟಿಐ
Published 24 ಏಪ್ರಿಲ್ 2024, 16:01 IST
Last Updated 24 ಏಪ್ರಿಲ್ 2024, 16:01 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ತಿರುವನಂತಪುರ: ಲೋಕಸಭಾ ಚುನಾವಣೆಯಲ್ಲಿ ಸೋಲು ಎದುರಾಗುವ ಆತಂಕದಿಂದ ಪ್ರಧಾನಿ ಅವರು ಹತಾಶೆಗೊಂಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮೋದಿ ಅವರು ಚುನಾವಣೆಗಾಗಿ ‘ಮಂಗಳಸೂತ್ರ’ ವಿಷಯ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್‌ ಪಕ್ಷವು 55 ವರ್ಷಗಳ ಆಡಳಿತ ನಡೆಸಿದ್ದು, ಮಂಗಳಸೂತ್ರ ಕಸಿದುಕೊಳ್ಳುವ ಕೆಲಸ ಮಾಡಿದೆಯೇ?’ ಎಂದು ತಿರುಗೇಟು ನೀಡಿದರು. 

‘ಕಾಂಗ್ರೆಸ್‌ ಪಕ್ಷದ ನಾಯಕರು ದೇಶಕ್ಕಾಗಿ ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. ಇಂದಿರಾ ಗಾಂಧಿ ಅವರು 1962ರ ಯುದ್ಧದ ಸಮಯದಲ್ಲಿ ತಮ್ಮ ಆಭರಣಗಳನ್ನು ದಾನ ಮಾಡಿದ್ದರು. ಮೋತಿಲಾಲ್‌ ನೆಹರೂ ಮತ್ತು ಜವಾಹರಲಾಲ್‌ ನೆಹರೂ ಅವರು ಸ್ಯಾತಂತ್ರ್ಯ ಹೋರಾಟದ ಅವಧಿಯಲ್ಲಿ ತಮ್ಮ ಮನೆಗಳನ್ನು ದಾನ ಮಾಡಿದ್ದರು’ ಎಂದು ಹೇಳಿದರು.

ADVERTISEMENT

‘ದೇಶದಲ್ಲಿ ಕಾಂಗ್ರೆಸ್ ಪರ ಅಲೆಯಿದೆ. ಆದರೆ ಆ ಅಲೆಯು ಗುಪ್ತಗಾಮಿನಿಯಂತೆ ಇದ್ದು ಹೊರಕ್ಕೆ ಗೋಚರಿಸುತ್ತಿಲ್ಲ. ಅಂತಹ ಮತದಾರರ ಬಗ್ಗೆ ಮೋದಿ ಅವರಿಗೆ ಭಯವಿದೆ. ಇದೇ ಕಾರಣದಿಂದ ಕಾಂಗ್ರೆಸ್‌ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ನಿಮಗೆ 400 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದ್ದರೆ, ಭ್ರಷ್ಟರನ್ನು ಏಕೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೀರಿ’ ಎಂದು ಖರ್ಗೆ ಪ್ರಶ್ನಿಸಿದರು.

‘ಪುಲ್ವಾಮಾ ಯೋಧರ ಪತ್ನಿಯರ ಮಂಗಳಸೂತ್ರ ಕಸಿದದ್ದು ಯಾರು?’ ಉನ್ನಾವ್ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರ 'ಮಂಗಳಸೂತ್ರ' ಹೇಳಿಕೆ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್‌ ಯಾದವ್ ‘ಪುಲ್ವಾಮಾದಲ್ಲಿ ಹತರಾದ ಸೈನಿಕರ ಪತ್ನಿಯರ ಮಂಗಳಸೂತ್ರವನ್ನು ಯಾರು ಕಿತ್ತುಕೊಂಡರು ಎಂಬುದಕ್ಕೆ ಬಿಜೆಪಿ ಉತ್ತರಿಸಬೇಕು’ ಎಂದು ಆಗ್ರಹಿಸಿದರು.

‘ಮಂಗಳಸೂತ್ರ ಬಗ್ಗೆ ಮಾತನಾಡುವವರು ಪುಲ್ವಾಮಾ ಘಟನೆ ಬಗ್ಗೆಯೂ ಮಾತನಾಡಬೇಕು. ಆ ಘಟನೆಯ ಹಿಂದೆ ಯಾವ ಕೈವಾಡವಿದೆ ಘಟನೆಗೆ ಸಂಬಂಧಿಸಿದಂತೆ ಸರ್ಕಾರವು ಏನು ಕ್ರಮ ಕೈಗೊಂಡಿದೆ’ ಎಂಬ ಬಗ್ಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು. 2019ರ ಫೆಬ್ರುವರಿಯಲ್ಲಿ ಪುಲ್ವಾಮಾದಲ್ಲಿ ಸೈನಿಕರ ವಾಹನದ ಮೇಲೆ ನಡೆದಿದ್ದ ದಾಳಿಯಲ್ಲಿ ಸಿಆರ್‌ಪಿಎಫ್‌ನ 40ಕ್ಕೂ ಅಧಿಕ ಯೋಧರು ಮೃತಪಟ್ಟಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.