ಸಸಾನ್ (ಗುಜರಾತ್): ವಿಶ್ವ ವನ್ಯಜೀವಿ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಗುಜರಾತ್‌ನ ಜುನಾಗಢ್ ಜಿಲ್ಲೆಯ ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಸಿಂಹ ಸಫಾರಿ ನಡೆಸಿದ್ದಾರೆ.
ಸಾಮೂಹಿಕ ಪ್ರಯತ್ನಗಳಿಂದ ಗಿರ್ ಅಭಯಾರಣ್ಯದಲ್ಲಿ ಏಷ್ಯಾಟಿಕ್ ಸಿಂಹಗಳ ಜನಸಂಖ್ಯೆಯು ಸ್ಥಿರವಾದ ಏರಿಕೆಯನ್ನು ಕಂಡಿದೆ. ಏಷ್ಯಾಟಿಕ್ ಸಿಂಹಗಳ ಆವಾಸಸ್ಥಾನವನ್ನು ಸಂರಕ್ಷಿಸುವಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಜನರು ಮತ್ತು ವಿಶೇಷವಾಗಿ ಮಹಿಳೆಯರ ಕೊಡುಗೆಯನ್ನು ಅವರು ಎಕ್ಸ್ ಪೋಸ್ಟ್ ಮೂಲಕ ಶ್ಲಾಘಿಸಿದ್ದಾರೆ.
‘ಇಂದು ಬೆಳಿಗ್ಗೆ, ವಿಶ್ವ ವನ್ಯಜೀವಿ ದಿನದಂದು, ನಾನು ಗಿರ್‌ನಲ್ಲಿ ಸಫಾರಿಗೆ ಹೋಗಿದ್ದೆ, ಅದು ನಮಗೆಲ್ಲರಿಗೂ ತಿಳಿದಿರುವಂತೆ, ಭವ್ಯವಾದ ಏಷ್ಯಾಟಿಕ್ ಸಿಂಹದ ನೆಲೆಯಾಗಿದೆ. ಗಿರ್ ಭೇಟಿಯಿಂದ ನಾನು ಗುಜರಾತ್ ಸಿಎಂ ಆಗಿ ಸೇವೆ ಸಲ್ಲಿಸಿದಾಗ ನಾವು ಒಟ್ಟಾಗಿ ಮಾಡಿದ ಕೆಲಸದ ಅನೇಕ ನೆನಪುಗಳು ಮರುಕಳಿಸಿವೆ ಎಂದು ಅವರು ಹೇಳಿದ್ದಾರೆ.
ಕಳೆದ ಹಲವು ವರ್ಷಗಳಿಂದ ನಮ್ಮ ಸಾಮೂಹಿಕ ಪ್ರಯತ್ನಗಳು ಏಷ್ಯಾಟಿಕ್ ಸಿಂಹಗಳ ಸಂಖ್ಯೆಯು ಸ್ಥಿರವಾಗಿ ಏರುತ್ತಿರುವುದಕ್ಕೆ ಕಾರಣವಾಗಿದೆ. ಏಷ್ಯಾಟಿಕ್ ಸಿಂಹದ ಆವಾಸಸ್ಥಾನವನ್ನು ಸಂರಕ್ಷಿಸುವಲ್ಲಿ ಬುಡಕಟ್ಟು ಸಮುದಾಯಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮಹಿಳೆಯರ ಪಾತ್ರವು ಶ್ಲಾಘನೀಯವಾಗಿದೆ ಎಂದು ಮೋದಿ ಹೇಳಿದ್ದಾರೆ.
ಕಳೆದ ದಶಕದಲ್ಲಿ ಸಿಂಹಗಳು ಮಾತ್ರವಲ್ಲದೆ, ಹುಲಿ, ಚಿರತೆ, ಘೇಂಡಾಮೃಗಗಳ ಸಂಖ್ಯೆಯೂ ಹೆಚ್ಚಾಗಿದೆ. ಇದು ನಾವು ವನ್ಯಜೀವಿಗಳನ್ನು ಎಷ್ಟು ಪ್ರೀತಿಸುತ್ತೇವೆ ಮತ್ತು ಪ್ರಾಣಿಗಳಿಗೆ ಸುಸ್ಥಿರ ಆವಾಸಸ್ಥಾನಗಳನ್ನು ನಿರ್ಮಿಸಲು ಕೆಲಸ ಮಾಡುತ್ತಿದ್ದೇವೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಸಫಾರಿಯ ಸಮಯದಲ್ಲಿ ತಾವು ಕಂಡ ಸಿಂಹಗಳ ಚಿತ್ರಗಳನ್ನು ಪ್ರಧಾನಿ ಪೋಸ್ಟ್ ಮಾಡಿದ್ದಾರೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್, ಇತರ ಸಚಿವರು ಮತ್ತು ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ಸಫಾರಿಯ ಸಮಯದಲ್ಲಿ ಮೋದಿ ಅವರೊಂದಿಗೆ ಇದ್ದರು.
ನಂತರ ಪ್ರಧಾನಿ ಗಿರ್ ವನ್ಯಜೀವಿ ಅಭಯಾರಣ್ಯದ ಪ್ರಧಾನ ಕಚೇರಿಯಾದ ಸಸನ್ ಗಿರ್‌ನಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಏಳನೇ ಸಭೆಯ ಅಧ್ಯಕ್ಷತೆ ವಹಿಸಲು ತೆರಳಿದರು. ದೇಶದಲ್ಲಿ ಗುಜರಾತ್ ಏಷ್ಯಾಟಿಕ್ ಸಿಂಹಗಳಿಗೆ ಏಕೈಕ ಆವಾಸಸ್ಥಾನವಾಗಿದೆ. ಏಷ್ಯಾಟಿಕ್ ಸಿಂಹಗಳ ಸಂರಕ್ಷಣೆಗಾಗಿ ಉದ್ದೇಶಿಸಲಾದ ಪ್ರಾಜೆಕ್ಟ್ ಲಯನ್‌ಗಾಗಿ ಕೇಂದ್ರ ಸರ್ಕಾರವು ₹2,900 ಕೋಟಿಗೂ ಹೆಚ್ಚಿನ ಹಣವನ್ನು ಅನುಮೋದಿಸಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ಪ್ರಸ್ತುತ, ಏಷ್ಯಾಟಿಕ್ ಸಿಂಹಗಳು ಗುಜರಾತ್‌ನ 9 ಜಿಲ್ಲೆಗಳ 53 ತಾಲೂಕುಗಳಲ್ಲಿ ಸುಮಾರು 30,000 ಚದರ ಕಿಲೋಮೀಟರ್‌ಗಳಲ್ಲಿ ವಾಸಿಸುತ್ತಿವೆ ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.