ನವದೆಹಲಿ: ಮಹಿಳೆಯರು ಮತ್ತು ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆಗಳನ್ನು ನೀಡುವ ಸಲುವಾಗಿ ‘ಸ್ವಸ್ಥ ನಾರಿ, ಸಶಕ್ತ ಪರಿವಾರ’ ಎಂಬ ವಿಶೇಷ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17ರಂದು ಚಾಲನೆ ನೀಡಲಿದ್ದಾರೆ.
‘ಈ ಅಭಿಯಾನದ ಭಾಗವಾಗಿ ದೇಶದಾದ್ಯಂತ ಆಯುಷ್ಮಾನ್ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಇತರ ವೈದ್ಯಕೀಯ ಕೇಂದ್ರಗಳಲ್ಲಿ 75 ಸಾವಿರ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರು ‘ಎಕ್ಸ್’ ಮೂಲಕ ತಿಳಿಸಿದ್ದಾರೆ.
‘ಮಹಿಳೆಯರು ಮತ್ತು ಮಕ್ಕಳಿಗಾಗಿ ವಿಶೇಷ ಆರೋಗ್ಯ ಸೇವೆಗಳನ್ನು ಒದಗಿಸುವ ಮತ್ತು ಉತ್ತಮ ಆರೋಗ್ಯ ಸೇವೆಯನ್ನು ನೀಡುವ ಸರ್ಕಾರದ ಗುರಿಗೆ ಮತ್ತಷ್ಟು ಬಲ ನೀಡುವ ಉದ್ದೇಶದಿಂದ ಶಿಬಿರಗಳನ್ನು ಆಯೋಜಿಸಲಾಗಿದೆ. ಇದರ ಜೊತೆಗೆ ಪೌಷ್ಟಿಕ ಆಹಾರ ಸೇವನೆ, ಆರೋಗ್ಯ ಜಾಗೃತಿ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ ಸಲುವಾಗಿ ಎಲ್ಲ ಅಂಗನವಾಡಿಗಳಲ್ಲಿ ‘ಪೋಷಣ್ ಮಾ’ ಕಾರ್ಯಕ್ರಮವನ್ನೂ ನಡೆಸಲಾಗುತ್ತದೆ’ ಎಂದು ಹೇಳಿದ್ದಾರೆ.
‘ಎಲ್ಲ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ವಲಯದಲ್ಲಿರುವವರು ಮುಂದೆ ಬಂದು ಈ ಅಭಿಯಾನದ ಭಾಗವಾಗಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.