ADVERTISEMENT

ಪ್ರಧಾನಿ ಮೋದಿ ಬಿಳಿ ಕುದುರೆ ಮೇಲೆ ಕುಳಿತು ಖಡ್ಗ ಮೇಲೆತ್ತಿದ ಹೀರೋ: ಶಶಿ ತರೂರ್

ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಅಲ್ಲ?

ಏಜೆನ್ಸೀಸ್
Published 4 ನವೆಂಬರ್ 2018, 5:57 IST
Last Updated 4 ನವೆಂಬರ್ 2018, 5:57 IST
ಶಶಿ ತರೂರ್
ಶಶಿ ತರೂರ್   

ಕೋಲ್ಕತ್ತ:‘ಪ್ರಧಾನಿ ನರೇಂದ್ರ ಮೋದಿ ಅವರು ಬಿಳಿ ಕುದುರೆ ಮೇಲೆ ಕುಳಿತುಕೊಂಡು ಖಡ್ಗ ಮೇಲೆತ್ತಿ ಹಿಡಿದಿರುವ ಹೀರೋ’ ಎಂದು ಕಾಂಗ್ರೆಸ್‌ ಮುಖಂಡ ಶಶಿ ತರೂರ್ ವ್ಯಂಗ್ಯವಾಡಿದ್ದಾರೆ.

ಉದ್ಯಮ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು ‘ಮೋದಿ ಅವರದ್ದು ಏಕಕೇಂದ್ರಿತ ಸರ್ಕಾರ. ಎಲ್ಲರೂ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಈಗಿನ ಪ್ರಧಾನಿ ಕಾರ್ಯಾಲಯ (ಪಿಎಂಒ) ಇತಿಹಾಸದಲ್ಲೇ ಹೆಚ್ಚು ಕೇಂದ್ರೀಕೃತವಾದದ್ದು’ ಎಂದು ಟೀಕಿಸಿದ್ದಾರೆ.

ಪ್ರಧಾನಿ ಕಾರ್ಯಾಲಯವೇ ಪ್ರತಿಯೊಂದು ನಿರ್ಧಾರವನ್ನೂ ಕೈಗೊಳ್ಳುತ್ತದೆ. ಪ್ರತಿ ಕಡತವನ್ನೂ ಅನುಮೋದನೆಗಾಗಿ ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಲೇಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಬೆಂಗಳೂರಿನಲ್ಲಿ ಈಚೆಗೆ ನಡೆದ ಸಾಹಿತ್ಯೋತ್ಸವದಲ್ಲಿ ಮಾತನಾಡಿದ್ದ ತರೂರ್‌, ‘ಆರ್‌ಎಸ್‌ಎಸ್‌ ಮುಖಂಡರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಿವಲಿಂಗದ ಮೇಲೆ ಕುಳಿತ ಚೇಳಿಗೆ ಹೋಲಿಸಿದ್ದರು’ ಎಂದು ಹೇಳಿದ್ದರು. ಈ ಹೇಳಿಕೆ ವಿವಾದಕ್ಕೀಡಾಗಿತ್ತಲ್ಲದೆ, ತರೂರ್‌ ವಿರುದ್ಧ ದೆಹಲಿಯ ಬಿಜೆಪಿ ಮುಖಂಡ ರಾಜೀವ್‌ ಬಬ್ಬರ್‌ ಎಂಬುವವರು ದೆಹಲಿಯ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಅಲ್ಲದಿರಬಹುದು: ತರೂರ್

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಚುನಾವಣಾಪೂರ್ವ ಹಾಗೂ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲಿದೆ. ಆದರೆ ರಾಹುಲ್ ಗಾಂಧಿಯವರು ಪ್ರಧಾನಿ ಅಭ್ಯರ್ಥಿ ಆಗಿಲ್ಲದೇ ಇರಬಹುದು ಎಂದು ತರೂರ್ ಹೇಳಿದ್ದಾರೆ. ಪ್ರಧಾನಿ ಅಭ್ಯರ್ಥಿ ವಿಚಾರದಲ್ಲಿ ಮಿತ್ರಪಕ್ಷಗಳ ಜತೆ ಸೇರಿ ಕಾಂಗ್ರೆಸ್ ಒಮ್ಮತದ ನಿರ್ಧಾರ ಕೈಗೊಳ್ಳಲಿದೆ. ಪ್ರಣವ್ ಮುಖರ್ಜಿ, ಪಿ.ಚಿದಂಬರಂ ಅವರಂತಹ ಪ್ರಮುಖರು ನಮ್ಮ ಜತೆಗಿದ್ದರಲ್ಲದೆ ಉತ್ತಮ ದಾಖಲೆ ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.

ಲೋಕಸಭೆ ಚುನಾವಣೆ ಬಹಳ ಪ್ರಮುಖವಾದದ್ದಾಗಿದ್ದು, ಎನ್‌ಡಿಎಗೆ ಎರಡನೇ ಬಾರಿ ಅಧಿಕಾರ ದೊರೆಯುವುದಿಲ್ಲ ಎಂದು ಅವರು ಅಭಿಪ್ರಾಯ‍ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.