ಪ್ರಧಾನಿ ನರೇಂದ್ರ ಮೋದಿ
(ಸಂಗ್ರಹ ಚಿತ್ರ)
ನವದೆಹಲಿ: ತೆರಿಗೆ ಪಾಲು ಹಂಚಿಕೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂಬ ಧ್ವನಿ ಬಲವಾಗುತ್ತಿರುವ ಹೊತ್ತಿನಲ್ಲೇ, ‘ರಾಷ್ಟ್ರೀಯ ಗುರಿಗಳನ್ನು ಸಾಧಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯಗಳು ಸಹಕಾರದಿಂದ ಕೆಲಸ ಮಾಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಲ್ಲಿ ಪ್ರತಿಪಾದಿಸಿದರು.
ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ನಾವು ಅಭಿವೃದ್ಧಿಯ ವೇಗ ಹೆಚ್ಚಿಸಬೇಕು. ಕೇಂದ್ರ ಮತ್ತು ಎಲ್ಲ ರಾಜ್ಯಗಳು ‘ಟೀಮ್ ಇಂಡಿಯಾ’ದಂತೆ ಒಟ್ಟಾಗಿ ಕೆಲಸ ಮಾಡಿದರೆ, ಯಾವುದೇ ಗುರಿ ಅಸಾಧ್ಯವಲ್ಲ’ ಎಂದರು.
‘ನೀತಿಗಳನ್ನು ಜಾರಿಗೆ ತರುವ ಮೂಲಕ ಸಾಮಾನ್ಯ ನಾಗರಿಕರ ಜೀವನದಲ್ಲಿ ಬದಲಾವಣೆ ತರುವ ರೀತಿಯಲ್ಲಿ ನಾವು ಕೆಲಸ ಮಾಡಬೇಕು. 140 ಕೋಟಿ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಒಂದು ತಂಡವಾಗಿ ಕೆಲಸ ಮಾಡಬೇಕಿದೆ’ ಎಂದು ಅವರು ತಿಳಿಸಿದರು.
ಪ್ರತಿಯೊಂದು ರಾಜ್ಯವನ್ನು ವಿಕಸಿತ, ಪ್ರತಿ ನಗರವನ್ನು ವಿಕಸಿತ, ಪ್ರತಿ ನಗರಪಾಲಿಕೆಯನ್ನು ವಿಕಸಿತ ಮತ್ತು ಪ್ರತಿ ಹಳ್ಳಿಯನ್ನು ವಿಕಸಿತ ಮಾಡುವ ಗುರಿಯನ್ನು ನಾವು ಹೊಂದಿರಬೇಕು. ಈ ದಿಕ್ಕಿನಲ್ಲಿ ನಾವು ಕೆಲಸ ಮಾಡಿದರೆ, ಅಭಿವೃದ್ಧಿ ಹೊಂದಿದ ಭಾರತ ಆಗಲು ನಾವು 2047 ರವರೆಗೆ ಕಾಯಬೇಕಾಗಿಲ್ಲ’ ಎಂದು ಮೋದಿ ಹೇಳಿದರು.
‘ಭಾರತವು ವೇಗವಾಗಿ ನಗರೀಕರಣಗೊಳ್ಳುತ್ತಿದೆ’ ಎಂದ ಅವರು, ‘ಭವಿಷ್ಯಕ್ಕೆ ಸಿದ್ಧವಾದ ನಗರಗಳತ್ತ ನಾವು ಕೆಲಸ ಮಾಡಬೇಕು. ಬೆಳವಣಿಗೆ, ಆವಿಷ್ಕಾರ ಮತ್ತು ಸುಸ್ಥಿರತೆಯು ಭಾರತದ ನಗರಗಳ ಅಭಿವೃದ್ಧಿಯ ಎಂಜಿನ್ ಆಗಿರಬೇಕು’ ಎಂದು ಹೇಳಿದರು.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ.ಆರ್.ಸುಬ್ರಹ್ಮಣ್ಯಂ, ‘ಹೂಡಿಕೆದಾರರನ್ನು ಆಕರ್ಷಿಸಲು, ಉತ್ಪಾದನೆ ಉತ್ತೇಜಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಅಡೆತಡೆಗಳನ್ನು ನಿವಾರಿಸುವಂತೆ ಪ್ರಧಾನಿ ಮೋದಿ ಅವರು ರಾಜ್ಯಗಳಿಗೆ ಸಲಹೆ ನೀಡಿದರು. ಕೃಷಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಸೂಚಿಸಿದರು’ ಎಂದರು.
ಸಿದ್ದರಾಮಯ್ಯ ಸೇರಿ ನಾಲ್ವರು ಸಿ.ಎಂ ಗೈರು
ಆಯೋಗದ ಸಭೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (ಕರ್ನಾಟಕ), ಮಮತಾ ಬ್ಯಾನರ್ಜಿ (ಪಶ್ಚಿಮ ಬಂಗಾಳ), ನಿತೀಶ್ ಕುಮಾರ್ (ಬಿಹಾರ) ಹಾಗೂ ಎನ್.ರಂಗಸಾಮಿ (ಪುದುಚೆರಿ) ಗೈರುಹಾಜರಾದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮ್ಮ ಸಂಪುಟ ಸಹೋದ್ಯೋಗಿ ಕೆ.ಎನ್. ಬಾಲಗೋಪಾಲ್ ಅವರನ್ನು ಕಳುಹಿಸಿಕೊಟ್ಟರು.
ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಇಂದಿರಾ ಕ್ಯಾಂಟೀನ್‌ಗಳ ಉದ್ಘಾಟನೆ ಹಾಗೂ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ‘ಸಿದ್ದರಾಮಯ್ಯ ಅವರು ಸಭೆಯನ್ನು ಬಹಿಷ್ಕರಿಸಿಲ್ಲ. ಮೈಸೂರಿನಲ್ಲಿ ಪೂರ್ವನಿಗದಿತ ಕಾರ್ಯಕ್ರಮ ಇದ್ದುದರಿಂದ ಗೈರುಹಾಜರಾಗಿದ್ದಾರೆ. ಅವರ ಭಾಷಣವನ್ನು ಆಡಳಿತ ಮಂಡಳಿ ಸಭೆಗೆ ಕಳುಹಿಸಿಕೊಡಲಾಗಿದೆ’ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ಸ್ಪಷ್ಟಪಡಿಸಿವೆ. ಆದರೆ, ಅವರ ಭಾಷಣವನ್ನು ಸಭೆಯಲ್ಲಿ ಯಾರು ಮಂಡಿಸುತ್ತಾರೆ ಎಂಬುದನ್ನು ತಿಳಿಸಲಿಲ್ಲ. ಮುಖ್ಯಮಂತ್ರಿಗಳ 16 ಪುಟಗಳ ಭಾಷಣದ ಪ್ರತಿಯನ್ನು ಸಂಜೆ 6.40ಕ್ಕೆ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಯಿತು.
ಪ್ರಗತಿಯ ಹೊರತಾಗಿಯೂ, ಪ್ರಾದೇಶಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಅಸಮಾನತೆ ಹೆಚ್ಚುತ್ತಿದೆ. ಸಮಾನ ಅಭಿವೃದ್ಧಿಯನ್ನು ಖಚಿತ ಪಡಿಸಿಕೊಳ್ಳುವುದು ನೈಜ ಸವಾಲು. ವಿಕಸಿತ ಭಾರತ ಕೇವಲ ಘೋಷಣೆಯಾಗಿರಬಾರದು. ಅದು ನಮ್ಮೆಲ್ಲರಿಗೂ ಸವಾಲು ಆಗಿರಬೇಕು. ಅಸಮಾನತೆ ಅಂತರ ಕನಿಷ್ಠ ಮಟ್ಟಕ್ಕೆ ಇಳಿಯಬೇಕು. ದೇಶವು ಸಬಲೀಕರಣಗೊಂಡ ರಾಜ್ಯಗಳ ಒಕ್ಕೂಟವಾಗಿ ಒಟ್ಟಾಗಿ ಅಭಿವೃದ್ಧಿ ಆಗಬೇಕು. ಪ್ರಬಲ, ಸಮಾನ ಮತ್ತು ಸಬಲೀಕರಣಗೊಂಡ ರಾಜ್ಯಗಳಿಂದ ಮಾತ್ರ ಬಲವಾದ ಒಕ್ಕೂಟ ಹೊರಹೊಮ್ಮಲು ಸಾಧ್ಯ.– ಸಿದ್ದರಾಮಯ್ಯ, ಕರ್ನಾಟಕ ಮುಖ್ಯಮಂತ್ರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರವನ್ನು ನಿಂದಿಸುತ್ತಾ ಕೂತರೆ ಪ್ರಯೋಜನವಿಲ್ಲ. ಹದಿನಾಲ್ಕು ಬಜೆಟ್ ಮಂಡಿಸಿದ ಅವರು ನೀತಿ ಆಯೋಗದ ಸಭೆಗೆ ಗೈರು ಆಗುವುದು ಎಷ್ಟು ಸರಿ? ರಾಜಕೀಯ ಪ್ರತಿಷ್ಠೆಗೆ ರಾಜ್ಯದ ಹಿತವನ್ನು ಬಲಿಕೊಡುವುದು ತಪ್ಪು. ಸಂವಾದವೇ ಇಲ್ಲದಿದ್ದರೆ ಸಮಸ್ಯೆ ಹೇಗೆ ಬಗೆಹರಿಯುತ್ತದೆ. ರಾಷ್ಟ್ರದ ನೀತಿ ನಿರೂಪಣೆ, ಅಭಿವೃದ್ಧಿಗೆ ಸಂಬಂಧಿಸಿ ಪ್ರಧಾನಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಅವರು ತಪ್ಪದೇ ಭಾಗವಹಿಸಬೇಕಿತ್ತು. ಮುಂದಾದರೂ ರಾಜ್ಯದ ಹಿತದೃಷ್ಟಿಯಿಂದ ಮುಖ್ಯಮಂತ್ರಿಯವರು ಇಂತಹ ಸಭೆಯಲ್ಲಿ ತಪ್ಪದೇ ಭಾಗವಹಿಸಬೇಕು ಎಂಬುದು ನನ್ನ ಸಲಹೆ. ಒಕ್ಕೂಟ ವ್ಯವಸ್ಥೆಯಲ್ಲಿ ಒಟ್ಟಿಗೆ ಕೆಲಸ ಮಾಡಬೇಕು. ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಖಂಡಿತಾ ಬೇಡ.– ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ
ಕೇಂದ್ರದ ತೆರಿಗೆಗಳಲ್ಲಿ ರಾಜ್ಯದ ಪಾಲನ್ನು ಶೇ 50ಕ್ಕೆ ಏರಿಸಬೇಕು. 15ನೇ ಹಣಕಾಸು ಆಯೋಗವು ರಾಜ್ಯಗಳಿಗೆ ಶೇ 42ರಷ್ಟು ಪಾಲು ನಿಗದಿಪಡಿಸಲಾಗಿದೆ. ಆದರೆ, ರಾಜ್ಯ ಪ್ರಸ್ತುತ ಕೇವಲ ಶೇ 33.16 ಪಡೆಯುತ್ತಿದೆ.– ಎಂ.ಕೆ.ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ
‘ವಿಕಸಿತ ಭಾರತ–2047’ ಗುರಿ ಮುಟ್ಟಲು ವೇಗವಾಗಿ ಕೆಲಸ ಮಾಡಲು ನೀತಿ ಆಯೋಗದಲ್ಲಿ ಜಿಡಿಪಿ ಬೆಳವಣಿಗೆ, ಜನಸಂಖ್ಯಾ ನಿಯಂತ್ರಣ ಹಾಗೂ ಕೃತಕ ಬುದ್ಧಿಮತ್ತೆ ಬಳಕೆಗೆ ಮೂರು ಉಪ ಗುಂಪುಗಳನ್ನು ರಚಿಸಬೇಕು.– ಎನ್.ಚಂದ್ರಬಾಬು ನಾಯ್ಡು, ಆಂಧ್ರ ಪ್ರದೇಶದ ಮುಖ್ಯಮಂತ್ರಿ
ತಮ್ಮ ಸರ್ಕಾರವು 2047ರ ವೇಳೆಗೆ ದೇಶದ ಜಿಡಿಪಿಗೆ ಶೇಕಡಾ 8 ರಷ್ಟು ಕೊಡುಗೆ ನೀಡುವ ಗುರಿ ಹೊಂದಿದೆ. ಆರು ಪ್ರಮುಖ ಮಹಾನಗರಗಳನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಕಾರ್ಯಪಡೆ ರಚಿಸಬೇಕು.– ರೇವಂತ್ ರೆಡ್ಡಿ, ತೆಲಂಗಾಣ ಮುಖ್ಯಮಂತ್ರಿ
ಅಯೋಗ್ಯ ಸಂಸ್ಥೆ ಎಂದ ಜೈರಾಮ್: ಟೀಕೆ
ನೀತಿ ಆಯೋಗವನ್ನು ‘ಅಯೋಗ್ಯ (ಅಸಮರ್ಥ)’ ಸಂಸ್ಥೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಜರಿದರು. ಆಯೋಗದ ಆಡಳಿತ ಮಂಡಳಿ ಸಭೆಯು ಬೂಟಾಟಿಕೆ ಎಂದು ಕಿಡಿಕಾರಿದರು. ಇದಕ್ಕೆ ಬಿಜೆಪಿ ನಾಯಕರು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದರು.
ಅಧಿಕಾರದಲ್ಲಿ ಇರುವವರು ದುರುದ್ದೇಶ ಪೂರಿತ ಮಾತು ಮತ್ತು ಕಾರ್ಯಗಳಿಂದ ಸಾಮಾಜಿಕ ಸಾಮರಸ್ಯದ ಬಂಧಗಳನ್ನು ನಾಶಪಡಿಸಿದರೆ ಅದು ಹೇಗೆ ವಿಕಸಿತ ಭಾರತ ಆಗುತ್ತದೆ ಎಂದು ಜೈರಾಮ್ ಪ್ರಶ್ನಿಸಿದರು.
‘ದೇಶದ ಅಭಿವೃದ್ಧಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೇರಿರುವ ಟೀಮ್ ಇಂಡಿಯಾದ ಸಭೆ ಇದು. ಜೈರಾಮ್ ರಮೇಶ್ ಇದರಲ್ಲಿಯೂ ತಪ್ಪು ಹುಡುಕುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸೈಯದ್ ಶಹನವಾಜ್ ಹುಸೇನ್ ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.