ನವದೆಹಲಿ: ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಭಾಷೆಯಲ್ಲಿರುವ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಸಂಬಂಧಿತ ಚಿತ್ರಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಮೋದಿ, ಈ ಗ್ರಂಥವು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿಯ ಮೂಲವಾಗಿದೆ ಎಂದು ಬಣ್ಣಿಸಿದ್ದಾರೆ.
'ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ರಷ್ಯಾ ಭಾಷೆಯಲ್ಲಿರುವ ಗೀತೆಯ ಪ್ರತಿಯನ್ನು ಉಡುಗೊರೆಯಾಗಿ ನೀಡಿದೆ. ಗೀತೆಯ ಬೋಧನೆಗಳು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತವೆ’ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.
ಗುರುವಾರ ಸಂಜೆ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ ರಷ್ಯಾದ ಅಧ್ಯಕ್ಷರನ್ನು ಪ್ರಧಾನಿ ಮೋದಿ ಸ್ವಾಗತಿಸಿದ್ದರು.
ನನ್ನ ಸ್ನೇಹಿತ ಅಧ್ಯಕ್ಷ ಪುಟಿನ್ ಅವರನ್ನು ಭಾರತಕ್ಕೆ ಸ್ವಾಗತಿಸಿರುವುದು ಅತ್ಯಂತ ಸಂತೋಷ ತಂದಿದೆ. ಇಂದು ಸಂಜೆ ಮತ್ತು ನಾಳೆ ಮಾತುಕತೆಗೆ ಎದುರು ನೋಡುತ್ತಿದ್ದೇನೆ. ಭಾರತ-ರಷ್ಯಾ ಸ್ನೇಹವು ಕಾಲಾತೀತವಾಗಿದ್ದು, ಇದು ನಮ್ಮ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿದೆ ಎಂದು ಗುರುವಾರ ತಿಳಿಸಿದ್ದಾರೆ.
ಇಬ್ಬರೂ ನಾಯಕರು ವಿಮಾನ ನಿಲ್ದಾಣದಿಂದ ಪ್ರಧಾನ ಮಂತ್ರಿಯ ಲೋಕ ಕಲ್ಯಾಣ್ ಮಾರ್ಗ್ ನಿವಾಸಕ್ಕೆ ಒಟ್ಟಿಗೆ ಕಾರಲ್ಲಿ ಪ್ರಯಾಣ ಬೆಳೆಸಿದ್ದರು. ಇದು ಇಬ್ಬರು ನಾಯಕರ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ಮತ್ತು ನಿಕಟ ಸಂಬಂಧವನ್ನು ಎತ್ತಿ ತೋರಿಸುತ್ತದೆ ಎಂದು ವರದಿ ತಿಳಿಸಿದೆ.
ನಾಲ್ಕು ವರ್ಷಗಳಲ್ಲಿ ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ಪುಟಿನ್, ಶುಕ್ರವಾರದವರೆಗೆ (ಡಿ.5) ನವದೆಹಲಿಯಲ್ಲಿ ಇರುತ್ತಾರೆ. ರಷ್ಯಾದ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯನ್ನು ಸಹ ನಡೆಸಲಿದ್ದಾರೆ.
ಪುಟಿನ್ ಅವರ ಈ ಭೇಟಿಯು ರಕ್ಷಣಾ, ವ್ಯಾಪಾರ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಸ್ಕೃತಿ ಮತ್ತು ಮಾನವೀಯ ವ್ಯವಹಾರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ನಿರೀಕ್ಷೆ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ-ರಷ್ಯಾ ಪಾಲುದಾರಿಕೆಯ ಮಹತ್ವದ ಬಗ್ಗೆ ಮಾಜಿ ರಾಜತಾಂತ್ರಿಕ ಅರುಣ್ ಸಿಂಗ್ ಮಾತನಾಡಿ, ‘ಇದು ಪುಟಿನ್ ಅವರ ಒಂದು ಪ್ರಮುಖ ಭೇಟಿ. ನನಗೆ ರಷ್ಯಾದಲ್ಲಿ ಎರಡು ಬಾರಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು. ಸೋವಿಯತ್ ಒಕ್ಕೂಟದ ಸಮಯದಲ್ಲಿ ಮತ್ತು ನಂತರ 1990ರ ದಶಕದಲ್ಲಿ ಸೋವಿಯತ್ ಒಕ್ಕೂಟ ವಿಸರ್ಜನೆಯ ನಂತರ ರಷ್ಯಾದಲ್ಲಿ ಕೆಲಸ ಮಾಡಿದ್ದೇನೆ. ಭಾರತ ಮತ್ತು ರಷ್ಯಾ ನಡುವೆ ಪಾಲುದಾರಿಕೆಗೆ ಐತಿಹಾಸಿಕ ಸ್ವರೂಪವಿದೆ’ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.