ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಮೂಲದ ಚಿಪ್ ತಯಾರಿಕಾ ಕಂಪನಿ ಕ್ವಾಲ್‌ಕಾಮ್ ಅಧ್ಯಕ್ಷ ಹಾಗೂ ಸಿಇಒ ಕ್ರಿಸ್ಟಿಯಾನೋ ಆರ್. ಅಮನ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಕ್ರಿಸ್ಟಿಯಾನೋ ಅವರು ಶುಕ್ರವಾರ ಪ್ರಧಾನ ಮಂತ್ರಿ ಅಧಿಕೃತ ನಿವಾಸದಲ್ಲಿ ಮೋದಿ ಅವರನ್ನು ಭೇಟಿಯಾಗಿದ್ದರು.
‘ಕ್ವಾಲ್‌ಕಾಮ್ ಸಿಇಒ ಕ್ರಿಸ್ಟಿಯಾನೋ ಅವರೊಂದಿಗೆ ಉತ್ತಮ ಮಾತುಕತೆ ನಡೆದಿದೆ. ಭೇಟಿಯ ವೇಳೆ ಕೃತಕ ಬುದ್ಧಿಮತ್ತೆ, ಕೌಶಲ್ಯ ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಚರ್ಚಿಸಲಾಗಿದ್ದು, ಭಾರತದ ಸೆಮಿಕಂಡಕ್ಟರ್ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಕ್ವಾಲ್‌ಕಾಮ್ ಕಂಪನಿಯು ದೊಡ್ಡ ಹೆಜ್ಜೆ ಇಡುತ್ತಿದೆ. ಆ ಕ್ಷೇತ್ರಗಳಲ್ಲಿ ಭಾರತದ ಬೆಳವಣಿಗೆಯ ವೇಗದ ಕುರಿತು ಚರ್ಚಿಸಲಾಗಿದೆ’ ಎಂದು ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಭೇಟಿ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕ್ರಿಸ್ಟಿಯಾನೋ, ‘ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಕ್ವಾಲ್‌ಕಾಮ್ ಸಹಯೋಗದೊಂದಿಗೆ ಭಾರತದಲ್ಲಿ ಎಐ ಹಾಗೂ ಸೆಮಿಕಂಡಕ್ಟರ್ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಭಾರತದಲ್ಲಿ ಎಐ ಸ್ಮಾರ್ಟ್ ಫೋನ್, ಕಂಪ್ಯೂಟರ್, ಸ್ಮಾರ್ಟ್ ಗ್ಲಾಸ್ ಹಾಗೂ ಕೈಗಾರಿಕೆಗಳ ಬೆಳವಣಿಗೆಗೆ ನೆರವಾಗಲಿದ್ದೇವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.