ADVERTISEMENT

ದಾಖಲೆಯ ಖಾದಿ ಉತ್ಪನ್ನ ಮಾರಾಟ ಸಾರ್ವಜನಿಕ ಭಾವನೆಗಳ ಪ್ರಬಲ ಸಂಕೇತ: ಪ್ರಧಾನಿ ಮೋದಿ

ಖಾದಿಯ ಮೇಲಿನ ಪ್ರೀತಿ ಪ್ರತಿದಿನ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಲೇ ಇರುತ್ತದೆ ಎಂಬ ವಿಶ್ವಾಸ ನನಗಿದೆ– ಪ್ರಧಾನಿ ನರೇಂದ್ರ ಮೋದಿ.

ಪಿಟಿಐ
Published 5 ಅಕ್ಟೋಬರ್ 2023, 7:56 IST
Last Updated 5 ಅಕ್ಟೋಬರ್ 2023, 7:56 IST
<div class="paragraphs"><p>ಪ್ರಧಾನಿ ಮೋದಿ</p></div>

ಪ್ರಧಾನಿ ಮೋದಿ

   

ನವದೆಹಲಿ: ಮಹಾತ್ಮಾ ಗಾಂಧಿ ಜಯಂತಿಯಂದು (ಅಕ್ಟೋಬರ್ 2ರಂದು) ಇಲ್ಲಿನ ಖಾದಿ ಭವನದಲ್ಲಿ ದಾಖಲೆಯ ಪ್ರಮಾಣದಲ್ಲಿ ಖಾದಿ ಉತ್ಪನ್ನ ಮಾರಾಟವಾಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಖಾದಿಯು ಸಾರ್ವಜನಿಕ ಭಾವನೆಗಳ ಪ್ರಬಲ ಸಂಕೇತ ಎಂದು ಹೇಳಿದ್ದಾರೆ.

ಗಾಂಧಿ ಜಯಂತಿಯಂದು ದೆಹಲಿಯ ಕನೌಟ್‌ ಪ್ರದೇಶದಲ್ಲಿರುವ ಖಾದಿ ಭವನದಲ್ಲಿ ಮೊದಲ ಬಾರಿಗೆ ₹1.5 ಕೋಟಿ ಮೌಲ್ಯದ ಖಾದಿ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಬುಧವಾರ ತಿಳಿಸಿದೆ.

ADVERTISEMENT

"ನಮ್ಮ ಕುಟುಂಬದ ಸದಸ್ಯರು ಖಾದಿ ಖರೀದಿಸಿದ ಹೊಸ ದಾಖಲೆ ಸಾರ್ವಜನಿಕ ಭಾವನೆಯ ಪ್ರಬಲ ಸಂಕೇತವಾಗಿದೆ. ಖಾದಿಯ ಮೇಲಿನ ಈ ಪ್ರೀತಿ ಪ್ರತಿದಿನ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಲೇ ಇರುತ್ತದೆ ಎಂಬ ವಿಶ್ವಾಸ ನನಗಿದೆ, ಇದು ಸ್ವಾವಲಂಬಿ ಭಾರತದ ದೃಷ್ಟಿಗೆ ಹೊಸ ಶಕ್ತಿಯನ್ನು ನೀಡುತ್ತದೆ" ಎಂದು ಪ್ರಧಾನಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸೆ.24 ರಂದು ತಮ್ಮ "ಮನ್ ಕಿ ಬಾತ್" ಕಾರ್ಯಕ್ರಮದಲ್ಲಿ ಗಾಂಧಿ ಜಯಂತಿಯಂದು ಖಾದಿ ಉತ್ಪನ್ನ ಖರೀದಿಸುವಂತೆ ಪ್ರಧಾನಿ ಮೋದಿ ಜನರಲ್ಲಿ ಮನವಿ ಮಾಡಿದ್ದರು. ಇದರ ಪರಿಣಾಮವಾಗಿ ಖಾದಿ ಭವನದಲ್ಲಿ ಒಂದೇ ದಿನದಲ್ಲಿ ₹1.52 ಕೋಟಿ ದಾಖಲೆಯ ಮಾರಾಟವಾಗಿದೆ ಎಂದು ತಿಳಿದು ಬಂದಿದೆ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಅಧಿಕೃತ ಹೇಳಿಕೆಯ ಪ್ರಕಾರ, "ಪ್ರಧಾನಿ ನರೇಂದ್ರ ಮೋದಿಯವರ ಮನವಿಯ ಮೇರೆಗೆ ದೆಹಲಿಯ ಜನರು ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಖರೀದಿಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಗಾಂಧಿ ಜಯಂತಿಯ ಸಂದರ್ಭದಲ್ಲಿ, ನವದೆಹಲಿಯ ಹೃದಯಭಾಗದಲ್ಲಿರುವ ಖಾದಿ ಭವನ ₹1,52,45,000 ಮೌಲ್ಯದ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಅತ್ಯಧಿಕ ಮಾರಾಟಕ್ಕೆ ಸಾಕ್ಷಿಯಾಗಿದೆ" ಎಂದು ಅದು ಹೇಳಿದೆ.

"ಗಾಂಧಿ ಜಯಂತಿಯಂದು ಖಾದಿ ಉತ್ಪನ್ನಗಳ ದಾಖಲೆಯ ಮಾರಾಟಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಬ್ರಾಂಡ್ ಪವರ್ ಮತ್ತು ಅವರ ಜನಪ್ರಿಯತೆ ಕಾರಣ" ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಅಧ್ಯಕ್ಷ ಮನೋಜ್ ಕುಮಾರ್ ಹೇಳಿದರು.

ಇತ್ತೀಚಿನ ಮಾರಾಟದ ಅಂಕಿಅಂಶಗಳ ಪ್ರಕಾರ, ಕಳೆದ ಹಣಕಾಸು ವರ್ಷ(2022-23)ದಲ್ಲಿ ಗಾಂಧಿ ಜಯಂತಿಯಂದು ಇದೇ ಭವನದಲ್ಲಿ ₹1,33,95,000 ಖಾದಿ ಉತ್ಪನ್ನಗಳು ಮಾರಾಟವಾಗಿದ್ದವು. ಈ ಬಾರಿ ಅದು ₹1,52,45,000ಕ್ಕೆ ಏರಿಕೆಯಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.