ADVERTISEMENT

ವಾರಣಾಸಿ: ರಿಕ್ಷಾ ಎಳೆಯುವವರ ಪುತ್ರಿ ವಿವಾಹಕ್ಕೆ ಶುಭ ಕೋರಿದ ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 7:46 IST
Last Updated 18 ಫೆಬ್ರುವರಿ 2020, 7:46 IST
ಪ್ರಧಾನಮಂತ್ರಿ ಕಚೇರಿಯಿಂದ ಬಂದಿರುವ ಅಭಿನಂದನಾ ಪತ್ರ
ಪ್ರಧಾನಮಂತ್ರಿ ಕಚೇರಿಯಿಂದ ಬಂದಿರುವ ಅಭಿನಂದನಾ ಪತ್ರ   

ವಾರಾಣಸಿ: ವಾರಣಾಸಿಯಲ್ಲಿರುವ ರಿಕ್ಷಾ ಎಳೆಯುವ ಮಂಗಲ್​ ಕೇವತ್​ ಎಂಬವರ ಮಗಳ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿ ಅಭಿನಂದನಾ ಪತ್ರವನ್ನು ಕಳುಹಿಸಿದ್ದಾರೆ.

ಪ್ರಧಾನಿ ಮೋದಿ ಅವರು ದತ್ತು ಪಡೆದ ದೊಮ್ರಿ ಎಂಬ ಗ್ರಾಮದ ನಿವಾಸಿಯಾದ ಮಂಗಲ್ ಕೇವತ್ ಅವರು, ತಮ್ಮ ಮಗಳ ಮದುವೆಯ ಆಹ್ವಾನ ಪತ್ರಿಕೆಯನ್ನು ಪ್ರಧಾನಿಗೆ ಕಳುಹಿಸಿಕೊಟ್ಟು, ಫೆಬ್ರುವರಿ 12ರಂದು ವಿವಾಹಕ್ಕೆ ಬರುವಂತೆ ಆಹ್ವಾನವಿತ್ತಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರಧಾನಿ ಕಚೇರಿಯು, ಶುಭಾಶಯ ಪತ್ರವನ್ನು ಮದುವೆ ದಿನದಂದೇ ಕಳುಹಿಸಿದೆ.

ಪತ್ರವನ್ನು ಪಡೆದ ಬಳಿಕ ಕೇವತ್ ಮಾತನಾಡಿ, ನಾವು ಮೊದಲ ಕರೆಯೋಲೆಯನ್ನು ಪ್ರಧಾನಮಂತ್ರಿಗೆ ಕಳುಹಿಸಿದೆವು. ಫೆಬ್ರುವರಿ 8ರಂದು ನಾನೇ ಅದನ್ನು ವೈಯಕ್ತಿಕವಾಗಿ ದೆಹಲಿಯ ಪ್ರಧಾನಮಂತ್ರಿ ಕಚೇರಿಗೆ ನೀಡಿದ್ದೆ. ಪ್ರಧಾನ ಮಂತ್ರಿ ಮೋದಿ ನಮ್ಮ ದೇವರು ಮತ್ತು ಗುರು, ಹಾಗಾಗಿ ನನ್ನ ಪುತ್ರಿಯ ಮೊದಲ ಕರೆಯೋಲೆಯನ್ನು ಅವರಿಗೆ ಕಳುಹಿಸಿದ್ದೆ. ಇದೀಗ ಪ್ರಧಾನಿ ಅವರು ಬರೆದ ಪತ್ರ ನಮ್ಮನ್ನು ತಲುಪಿದೆ ಮತ್ತು ಇದು ನಮಗೆ ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಧಾನಿಯಾದವರು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬಗ್ಗೆಯೂ ಇಷ್ಟು ಕಾಳಜಿ ವಹಿಸುತ್ತಾರೆ ಎನ್ನುವುದಕ್ಕೆ ಈ ಪತ್ರವೇ ಉದಾಹರಣೆಯಾಗಿದೆ ಎಂದು ಸಂತೋಷವನ್ನು ಹಂಚಿಕೊಂಡಿದ್ದಾರೆ ಕೇವತ್.
ಕೇವತ್ ಪತ್ನಿ ರೇಣು ದೇವಿ ಮಾತನಾಡಿ, ಸದ್ಯದಲ್ಲೇ ಉತ್ತರ ಪ್ರದೇಶಕ್ಕೆ ಆಗಮಿಸಲಿರುವ ಪ್ರಧಾನಿ ಅವರನ್ನು ಭೇಟಿ ಮಾಡಲು ನಾವು ಉತ್ಸುಕರಾಗಿದ್ದೇವೆ. ಅವರನ್ನು ಭೇಟಿಯಾದ ಬಳಿಕ ನಮ್ಮ ಕುಟುಂಬ ಎದುರಿಸುತ್ತಿರುವ ಸಂಕಷ್ಟಗಳನ್ನು ಅವರ ಬಳಿ ಹೇಳಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.