
ಪಶ್ಚಿಮ ಬಂಗಾಳದ ಮಾಲದಾ ಜಿಲ್ಲೆಯಲ್ಲಿ ಬಿಜೆಪಿ ಶನಿವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು
–ಪಿಟಿಐ ಚಿತ್ರ
ಮಾಲದಾ: ‘ಅಕ್ರಮ ವಲಸಿಗರ ನುಸುಳುವಿಕೆಯಿಂದಾಗಿ ಪಶ್ಚಿಮ ಬಂಗಾಳದ ಜನಸಂಖ್ಯೆಯ ಸ್ವರೂಪವೇ ಬದಲಾಗಿದೆ. ಆಡಳಿತ ಪಕ್ಷದ ‘ಪೋಷಣೆ ಮತ್ತು ಸಿಂಡಿಕೇಟ್ ರಾಜ್’ನಿಂದಾಗಿ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇಲ್ಲಿ ಶನಿವಾರ ಆಯೋಜಿಸಿದ್ದ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ‘ಬಂಗಾಳಕ್ಕೆ ಒಳನುಸುಳುವಿಕೆಯು ದೊಡ್ಡ ಸವಾಲಾಗಿದೆ. ಜಗತ್ತಿನಾದ್ಯಂತ ಶ್ರೀಮಂತ ರಾಷ್ಟ್ರಗಳು ಸಹ ಅಕ್ರಮ ವಲಸಿಗರನ್ನು ಪತ್ತೆ ಮಾಡಿ ಗಡೀಪಾರು ಮಾಡಲು ದೃಢ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ’ ಎಂದು ಪ್ರತಿಪಾದಿಸಿದರು.
‘ಅಭಿವೃದ್ಧಿ ಹೊಂದಿದ ದೇಶಗಳಿಗೆ ಹಣದ ಕೊರತೆಯಿಲ್ಲ. ಆದರೂ ಅವು ಅಕ್ರಮ ವಲಸಿಗರನ್ನು ಹೊರ ಹಾಕುತ್ತಿವೆ. ಪಶ್ಚಿಮ ಬಂಗಾಳದಿಂದಲೂ ಅಕ್ರಮ ವಲಸಿಗರನ್ನು ಹೊರ ಹಾಕುವುದು ಅವಶ್ಯವಾಗಿದೆ’ ಎಂದು ಹೇಳಿದರು.
‘ಮಾಲದಾ ಮತ್ತು ಮುರ್ಷಿದಾಬಾದ್ ಸೇರಿದಂತೆ ವಿವಿಧೆಡೆ ಅಕ್ರಮ ವಲಸಿಗರಿಂದಾಗಿ ಗಲಭೆಗಳು ಭುಗಿಲೆದ್ದಿವೆ. ಈ ವಲಸಿಗರು ನೆಲೆಗೊಳ್ಳುವಂತೆ ಮಾಡಲು ಟಿಎಂಸಿಯ ‘ಸಿಂಡಿಕೇಟ್’ ವ್ಯವಸ್ಥೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಅನೇಕ ಪ್ರದೇಶಗಳಲ್ಲಿ ಜನಸಂಖ್ಯೆಯ ಬದಲಾವಣೆಗೆ ಕಾರಣವಾಗಿದೆ’ ಎಂದು ಆರೋಪಿಸಿದರು.
‘ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳ ಎದುರಿಸಿ ಭಾರತಕ್ಕೆ ವಲಸೆ ಬಂದಿರುವ ಮತುವಾ ಸಮುದಾಯದವರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಬಗ್ಗೆ ಚಿಂತಿಸಬೇಕಾಗಿಲ್ಲ. ಧಾರ್ಮಿಕವಾಗಿ ಕಿರುಕುಳಕ್ಕೆ ಒಳಗಾಗಿರುವ ಎಲ್ಲ ನಿರಾಶ್ರಿತರಿಗೂ ದೇಶದಲ್ಲಿ ಆಶ್ರಯ ನೀಡಲಾಗುವುದು’ ಎಂದು ಧೈರ್ಯ ತುಂಬಿದರು.
‘ಟಿಎಂಸಿ ನಡೆಸುತ್ತಿರುವ ಗೂಂಡಾಗಿರಿ ಮತ್ತು ಬೆದರಿಕೆ ರಾಜಕೀಯವು ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಉತ್ತಮ ಆಡಳಿತವನ್ನು ಖಾತರಿಪಡಿಸಿದ ಬಿಜೆಪಿ ಆಡಳಿತದ ರಾಜ್ಯಗಳಿಂದ ಬಂಗಾಳವು ಸುತ್ತುವರಿದಿದೆ. ಈಗ ಇಲ್ಲೂ ಉತ್ತಮ ಆಡಳಿತ ದೊರೆಯುವ ಸಮಯ ಬಂದಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.