ADVERTISEMENT

ಏರುತ್ತಿರುವ ಕೋವಿಡ್‌ ಪ್ರಕರಣ; ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ಮಹತ್ವದ ಸಭೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2022, 5:53 IST
Last Updated 9 ಜನವರಿ 2022, 5:53 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ದೇಶದಲ್ಲಿ ಓಮೈಕ್ರಾನ್ ಒಳಗೊಂಡಂತೆ ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ (ಭಾನುವಾರ) 4.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ಜರುಗಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಈ ಕುರಿತು ಸುದ್ದಿ ಸಂಸ್ಥೆ 'ಎಎನ್‌ಐ' ಟ್ವೀಟಿಸಿದೆ. ಪ್ರಧಾನಿ ಮೋದಿ ಕೋವಿಡ್ ಸ್ಥಿತಿಯನ್ನು ಪರಿಶೀಲಿಸಲಿದ್ದು, ಸೂಕ್ತ ಕ್ರಮಗಳನ್ನು ಸೂಚಿಸಲಿದ್ದಾರೆ.

ಭಾನುವಾರ ಬೆಳಿಗ್ಗೆ ಕೊನೆಗೊಂಡಂತೆ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1.59 ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಕೋವಿಡ್ ದೃಢ ಪ್ರಮಾಣವು ಶೇ 10.21ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣ 5,90,611ಕ್ಕೆ ತಲುಪಿದೆ.

ಶನಿವಾರದಂದು 1.41 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದವು.

ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಸೇರಲಿರುವ ಕೋವಿಡ್ ಪರಿಶೀಲನಾ ಸಭೆಯು ಹೆಚ್ಚಿನ ಮಹತ್ವ ಪಡೆದಿದೆ. ಕೋವಿಡ್ ಮಾರ್ಗಸೂಚಿಗೆ ಸಂಬಂಧಿಸಿದಂತೆ ತಜ್ಞರ ಸಲಹೆಯಂತೆ ಹೆಚ್ಚಿನ ನಿರ್ಬಂಧಗಳನ್ನು ಹೇರಲು ರಾಜ್ಯಗಳಿಗೆ ಸೂಚಿಸಲಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

ದೇಶದಲ್ಲಿ ಇದುವರೆಗೆ 3,623 ಓಮೈಕ್ರಾನ್ ಪ್ರಕರಣಗಳು ವರದಿಯಾಗಿವೆ. 27 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಓಮೈಕ್ರಾನ್ ಪ್ರಕರಣ ಪತ್ತೆಯಾಗಿದ್ದು, ಮಹರಾಷ್ಟ್ರದಲ್ಲಿ ಮಾತ್ರ ಸಾವಿರಕ್ಕಿಂತಲೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.