ADVERTISEMENT

ಮಂತ್ರಿ ಪರಿಷತ್ ಸಭೆ ಇಂದು: ಪ್ರಫುಲ್‌ ಪಟೇಲ್‌ಗೆ ಕೇಂದ್ರ ಸಚಿವ ಸ್ಥಾನ?

ಪಿಟಿಐ
Published 2 ಜುಲೈ 2023, 16:14 IST
Last Updated 2 ಜುಲೈ 2023, 16:14 IST
ಪ್ರಫುಲ್‌ ಪಟೇಲ್‌–ಪಿಟಿಐ ಚಿತ್ರ
ಪ್ರಫುಲ್‌ ಪಟೇಲ್‌–ಪಿಟಿಐ ಚಿತ್ರ   

ನವದೆಹಲಿ: ಮಹಾರಾಷ್ಟ್ರದಲ್ಲಿನ ರಾಜಕೀಯ ಪಲ್ಲಟದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 3ರಂದು ಕೇಂದ್ರ ಮಂತ್ರಿ ಪರಿಷತ್‌ ಸಭೆ ಕರೆದಿದ್ದಾರೆ.  ಸಚಿವ ಸಂಪುಟದಲ್ಲಿ ಕೆಲವು ಬದಲಾವಣೆ ಮಾಡಲಿದ್ದು, ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಮುಂಬರುವ ಲೋಕಸಭೆ ಮತ್ತು ವಿವಿಧ ರಾಜ್ಯಗಳ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟ ಬದಲಾವಣೆಯ ಕಸರತ್ತಿಗೆ ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದರ ಭಾಗವಾಗಿಯೇ ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಪಕ್ಷದ ಉನ್ನತ ನಾಯಕರ ಜೊತೆಗೆ ಅವರು ಸಭೆಯನ್ನೂ ನಡೆಸಿದ್ದರು.

ಪ್ರಗತಿ ಮೈದಾನದಲ್ಲಿ ಹೊಸದಾಗಿ ನಿರ್ಮಿಸಿರುವ ಸಭಾಂಗಣದಲ್ಲಿ ಮಂತ್ರಿಮಂಡಲದ ಸಭೆ ನಡೆಯಲಿದೆ. ಇದೇ ಸಭಾಂಗಣದಲ್ಲಿಯೇ ಸೆಪ್ಟೆಂಬರ್‌ 20ರಂದು ಜಿ20 ಸಭೆಯೂ ನಿಗದಿಯಾಗಿದೆ.

ADVERTISEMENT

ಮಹಾರಾಷ್ಟ್ರದಲ್ಲಿ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಅವರು ಬಿಜೆಪಿ–ಶಿವಸೇನೆ(ಶಿಂದೆ ಬಣ) ಸರ್ಕಾರದ ಜೊತೆ ಕೈಜೋಡಿಸಿದ್ದಾರೆ. ಮತ್ತೊಂದೆಡೆ ಎನ್‌ಸಿಪಿ ಸಂಸದ ಪ್ರಫುಲ್ ಪಟೇಲ್‌ ಅವರು ತನ್ನ ದೀರ್ಘಕಾಲದ ರಾಜಕೀಯ ಮಾರ್ಗದರ್ಶಕರಾದ ಶರದ್‌ ಪವಾರ್‌ ಅವರನ್ನು ಬದಿಗೊತ್ತಿ ಅಜಿತ್‌ ಅವರ ಜೊತೆಗೂಡಿದ್ದಾರೆ. ಹಾಗಾಗಿ, ಕೇಂದ್ರ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಅವರು, ಹೊಸದಾಗಿ ಸಂಪುಟಕ್ಕೆ ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಮೈತ್ರಿಕೂಟದ ಭಾಗವಾಗಿರುವ ಅಜಿತ್‌ ಬೆಂಬಲಿಗರಿಗೂ ಕೇಂದ್ರ ಸಂಪುಟದಲ್ಲಿ ಸೂಕ್ತ ಸ್ಥಾನ ಕಲ್ಪಿಸುವ ಬಗ್ಗೆ ಮೋದಿ ಮತ್ತು ಅಮಿತ್‌ ಶಾ ಇಚ್ಛಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.