ಕೊಚ್ಚಿ: ಕೇರಳದ ಬಂದರು ನಗರ ಕೊಚ್ಚಿಯ ಸುತ್ತಮುತ್ತಲಿನ 10 ಸಣ್ಣ ದ್ವೀಪಗಳನ್ನು ಸಂಪರ್ಕಿಸುವ ದೇಶದ ಮೊದಲ ವಾಟರ್ ಮೆಟ್ರೊಗೆ ಪ್ರಧಾನಿ ನರೇಂದ್ರ ಮೋದಿಯವರು ಇದೇ 25ರಂದು ಚಾಲನೆ ನೀಡಲಿದ್ದಾರೆ.
ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೇಡ್ ಸಂಸ್ಥೆ ತಯಾರಿಸಿರುವ 8 ಎಲೆಕ್ಟ್ರಿಕ್ ಹೈಬ್ರಿಡ್ ಬೋಟ್‌ಗಳನ್ನು ಯೋಜನೆಗೆ ಬಳಸಲಾಗಿದೆ ಎಂದು ವಾಟರ್ ಮೆಟ್ರೊ ಅಧಿಕಾರಿಗಳು ಹೇಳಿರುವುದಾಗಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ರೈಲು, ರಸ್ತೆ ಮತ್ತು ನೀರಿನ ಮಾರ್ಗವನ್ನು ಸಂಪರ್ಕಿಸುವ ಇಂಟಿಗ್ರೇಟೆಡ್ ಮೆಟ್ರೊ ವ್ಯವಸ್ಥೆಯಿಂದ ರಾಜ್ಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ವಾಟರ್ ಮೆಟ್ರೊ ರಾಜ್ಯದ ಜಲ ಸಾರಿಗೆ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನು ತರಲಿದೆ. ಇದು ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇಂಧನ ಸಮರ್ಥ ಮತ್ತು ಪರಿಸರ ಸ್ನೇಹಿ ನೀರಿನ ಮೆಟ್ರೊ ಸೇವೆಯು ನಗರ ಪ್ರಯಾಣದ ಪರಿಕಲ್ಪನೆಯನ್ನು ಬದಲಾಯಿಸುತ್ತದೆ ಎಂದು ಅವರು ಹೇಳಿದ್ದಾರೆ.
ವಾಟರ್ ಮೆಟ್ರೊ, ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೊಸ ಉತ್ತೇಜನವನ್ನು ನೀಡುತ್ತದೆ ಎಂದೂ ಅವರು ಹೇಳಿದ್ದಾರೆ
ವಾಟರ್ ಮೆಟ್ರೊ ಕೈಗೆಟುಕುವ ಬೆಲೆಯಲ್ಲಿ ಐಷಾರಾಮಿ ಅನುಭವ ನೀಡುತ್ತದೆ. ನಾವು 75 ಕಿ.ಮೀ ಪ್ರಯಾಣದಲ್ಲಿ ಕ್ರಮಿಸುವ 15 ಮಾರ್ಗಗಳನ್ನು ಸುವ್ಯವಸ್ಥಿತಗೊಳಿಸಿದ್ದೇವೆ. ಕೊಚ್ಚಿನ್ ಶಿಪ್‌ಯಾರ್ಡ್‌ನಿಂದ ಮತ್ತಷ್ಟು ವಿದ್ಯುತ್ ಚಾಲಿತ ಹೈಬ್ರಿಡ್ ದೋಣಿಗಳನ್ನು ನಾವು ನಿರೀಕ್ಷಿಸುತ್ತೇವೆ ಎಂದು ಕೊಚ್ಚಿ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಲೋಕನಾಥ್ ಬೆಹ್ರಾ ಹೇಳಿದ್ದಾರೆ,
ಒಂದೇ ಟ್ರಿಪ್ ಟಿಕೆಟ್‌ಗಳಲ್ಲದೆ, ವಾರದ, ತಿಂಗಳ ಮತ್ತು ತ್ರೈಮಾಸಿಕ ಪಾಸ್‌ಗಳನ್ನು ಸಹ ಪಡೆಯಬಹುದು. ಆರಂಭದಲ್ಲಿ, ಪ್ರತಿ 15 ನಿಮಿಷಗಳಿಗೊಮ್ಮೆ ಹಡಗು ಇರುತ್ತದೆ ಎಂದೂ ಅವರು ಹೇಳಿದ್ದಾರೆ.
‘ವಾಟರ್ ಮೆಟ್ರೊದಲ್ಲಿ ನಾವು ಅತ್ಯಾಧುನಿಕ ಲಿಥಿಯಂ ಟೈಟಾನೈಟ್ ಸ್ಪಿನೆಲ್ ಬ್ಯಾಟರಿಗಳನ್ನು ಬಳಸಿದ್ದೇವೆ. ಸಾರ್ವಜನಿಕ ವಲಯದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಎಲೆಕ್ಟ್ರಿಕ್ ಹೈಬ್ರಿಡ್ ಬೋಟ್‌ಗಳು ಕಾರ್ಯನಿರ್ವಹಿಸುತ್ತಿರುವುದು ಇದೇ ಮೊದಲು’ಎಂದು ಕೇರಳದ ವಾಟರ್ ಮೆಟ್ರೊ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ (ಕಾರ್ಯಾಚರಣೆ) ಸಜನ್ ಪಿ ಜಾನ್ ಹೇಳಿದ್ದಾರೆ.
ವಿಶಾಲವಾದ ಕಿಟಕಿಗಳನ್ನು ಹೊಂದಿರುವ ಸಂಪೂರ್ಣ ಹವಾನಿಯಂತ್ರಿತ ದೋಣಿಗಳು ಹಿನ್ನೀರಿನ ರಮಣೀಯ ನೋಟದೊಂದಿಗೆ ಆರಾಮದಾಯಕ ಪ್ರಯಾಣ ಮತ್ತು ಫೂಲ್‌ಪ್ರೂಫ್ ಭದ್ರತೆಯನ್ನು ಒದಗಿಸುತ್ತವೆ ಎಂದು ಅವರು ಹೇಳಿದ್ದಾರೆ. ಯೋಜನೆಯ ಒಟ್ಟು ವೆಚ್ಚ ₹1,137 ಕೋಟಿಯಾಗಿದ್ದು, ಜರ್ಮನ್‌ನ ಕೆಎಫ್‌ಡಬ್ಲ್ಯು ಎಂಬ ಸಂಸ್ಥೆ ಮತ್ತು ರಾಜ್ಯ ಸರ್ಕಾರವು ಯೋಜನೆಗೆ ಹಣವನ್ನು ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.