ADVERTISEMENT

ಖುಷಿನಗರ್: ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜು

ಪಿಟಿಐ
Published 19 ಅಕ್ಟೋಬರ್ 2021, 6:39 IST
Last Updated 19 ಅಕ್ಟೋಬರ್ 2021, 6:39 IST
ಖುಷಿನಗರ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ನೋಟ
ಖುಷಿನಗರ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ನೋಟ   

ನವದೆಹಲಿ: ವಿಶ್ವದಾದ್ಯಂತ ಬೌದ್ಧಧರ್ಮದ ಧಾರ್ಮಿಕ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲಿರುವ ಉತ್ತರಪ್ರದೇಶದ ಖುಷಿನಗರ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ನೀಡುವರು.

ವಿಮಾನನಿಲ್ದಾಣ ಉದ್ಘಾಟನೆಗೂ ಮುನ್ನ ಪ್ರಧಾನಿ ಅವರು ಅಲ್ಲಿನ ಮಹಾಪರಿನಿರ್ವಾಣ ದೇವಸ್ಥಾನದಲ್ಲಿ ನಡೆಯಲಿರುವ ‘ಅಭಿಧಮ್ಮ’ ಕಾರ್ಯಕ್ರಮದಲ್ಲಿಯೂ ಭಾಗಹಿಸುವರು ಎಂದು ಪ್ರಧಾನಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ. ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

ಉದ್ಟಾಟನೆಯ ದಿನ ಕೊಲಂಬೊದಿಂದ ಸುಮಾರು 100 ಮಂದಿ ಬೌದ್ಧ ಭಿಕ್ಕುಗಳ ನಿಯೋಗವನ್ನು ಹೊತ್ತ ವಿಮಾನವು ನಿಲ್ದಾಣದ ನೆಲಸ್ಪರ್ಶ ಮಾಡಲಿದೆ. ನಿಯೋಗದ ಜೊತೆಗೆ 12 ಮಹಾತ್ಮರ ಪವಿತ್ರ ಅವಶೇಷಗಳನ್ನು ತರಲಿದ್ದು, ಇಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ.

ADVERTISEMENT

ನಿಯೋಗದಲ್ಲಿ ಶ್ರೀಲಂಕಾದ ಬೌದ್ಧಧರ್ಮದಲ್ಲಿನ ಎಲ್ಲ ನಾಲ್ಕು ಹಂತದ ಅರುನಾಯಕರಾದ (ಉಪ ನಾಯಕರು) ಅಸ್ಗಿರಿಯ, ಅಮರಪುರ, ರಾಮಾಣ್ಯ, ಮಲ್‌ವಟ್ಟಾದ, ನಮಲ್‌ ರಾಜಪಕ್ಸೆ ನೇತೃತ್ವದ ಶ್ರೀಲಂಕಾದ ಐವರು ಸಚಿವರ ನಿಯೋಗವೂ ಮೊದಲ ವಿಮಾನದಲ್ಲಿ ಬರಲಿದೆ.

ವಿಮಾನ ನಿಲ್ದಾಣವನ್ನು ಅಂದಾಜು ₹ 260 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ದೇಶಿ ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರಯಾಣಿಕರು ಬುದ್ಧನ ಮಹಾಪರಿನಿರ್ವಾಣ ತಾಣವನ್ನು ತಲುಪಲು ಸಂಪರ್ಕ ಕಲ್ಪಿಸಲಿದೆ. ಉತ್ತರ ಪ್ರದೇಶದ ಮತ್ತು ಬಿಹಾರದ ಸಮೀಪದ ಜಿಲ್ಲೆಗಳಲ್ಲಿ ಉದ್ಯೋಗಾವಕಾಶ ಮತ್ತು ಹೂಡಿಕೆ ಸಾಧ್ಯತೆಗಳು ಈ ನಿಲ್ದಾಣ ಅಭಿವೃದ್ಧಿಯಿಂದಾಗಿ ಹೆಚ್ಚಲಿವೆ ಎಂದು ಪ್ರಧಾನಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.