ADVERTISEMENT

ಟ್ರಂಪ್ ಜೊತೆ ಮಾತನಾಡುತ್ತಿದ್ದೇನೆ ಎಂದು ಏಕೆ ಒಪ್ಪಿಕೊಳ್ಳಲ್ಲ?:ಮೋದಿಗೆ ಕಾಂಗ್ರೆಸ್

ಪಿಟಿಐ
Published 5 ನವೆಂಬರ್ 2025, 5:04 IST
Last Updated 5 ನವೆಂಬರ್ 2025, 5:04 IST
ಜೈರಾಂ ರಮೇಶ್
ಜೈರಾಂ ರಮೇಶ್   

ನವದೆಹಲಿ: ವ್ಯಾಪಾರ ಒಪ್ಪಂದದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಾಗ್ಗೆ ಮಾತನಾಡುತ್ತಿರುತ್ತಾರೆ ಎಂದು ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದ್ದು, ಇದನ್ನು ಮೋದಿ ಏಕೆ ಒಪ್ಪಿಕೊಳ್ಳುತ್ತಿಲ್ಲ. ಯಾವುದರ ಬಗ್ಗೆ ಅವರಿಗೆ ಭಯವಿದೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಈ ಬಗ್ಗೆ ಪ್ರಶ್ನಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ ವಿಭಾಗದ ಉಸ್ತುವಾರಿ ಜೈರಾಂ ರಮೇಶ್, ‘ಮೇ 10ರಂದು ಸಂಜೆ 5.37ಕ್ಕೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯವರು ಮಾಡಿದ ಘೋಷಣೆಯಿಂದ ಮಾತ್ರ ಆಪರೇಷನ್ ಸಿಂಧೂರ ಅನ್ನು ಸ್ಥಗಿತಗೊಳಿಸಲಾಗಿದೆ ಎಂದು ಭಾರತದ ಜನರಿಗೆ ತಿಳಿಯಿತು. ಈಗ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ವ್ಯಾಪಾರ ಒಪ್ಪಂದದ ಕುರಿತು ಆಗಾಗ್ಗೆ ಪರಸ್ಪರ ಮಾತನಾಡುತ್ತಿದ್ದಾರೆ ಎಂದು ಭಾರತದ ಜನರು ಶ್ವೇತಭವನದ ವಕ್ತಾರೆ ಕ್ಯಾರೋಲಿನ್ ಲೀವಿಟ್ ಅವರಿಂದ ತಿಳಿದುಕೊಂಡಿದ್ದಾರೆ’ಎಂದು ಎಕ್ಸ್ ಪೋಸ್ಟ್‌ನಲ್ಲಿ ಕುಟುಕಿದ್ದಾರೆ.

‘ಅವರು ನಿಜವಾಗಿಯೂ ಪರಸ್ಪರ ಮಾತನಾಡಬೇಕು. ಆದರೆ, ಪ್ರಧಾನಿ ಅದನ್ನು ಒಪ್ಪಿಕೊಳ್ಳಲು ಏಕೆ ನಿರಾಕರಿಸುತ್ತಿದ್ದಾರೆ? ಯಾವುದರ ಬಗ್ಗೆ ಮೋದಿ ಹೆದರುತ್ತಿದ್ದಾರೆ?’ ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.

ADVERTISEMENT

ಭಾರತದ ಪ್ರಧಾನಿ ಮತ್ತು ಅಮೆರಿಕ ಅಧ್ಯಕ್ಷ ಆಗಾಗ್ಗೆ ಮಾತನಾಡುವ ಮೂಲಕ ವ್ಯಾಪಾರ ಒಪ್ಪಂದದ ಬಗ್ಗೆ ಚರ್ಚಿಸುತ್ತಿದ್ದಾರೆ. ಭಾರತ-ಅಮೆರಿಕದ ಭವಿಷ್ಯದ ಸಂಬಂಧದ ಬಗ್ಗೆ ಟ್ರಂಪ್ ಬಹಳ ಸಕಾರಾತ್ಮಕ ಮತ್ತು ಬಲವಾದ ನಂಬಿಕೆ ಇಟ್ಟುಕೊಂಡಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದರು. ನಿಮಗೆ ತಿಳಿದಿರುವಂತೆ, ಅವರು ಕೆಲವು ವಾರಗಳ ಹಿಂದೆ, ಓವಲ್ ಕಚೇರಿಯಲ್ಲಿ ಶ್ವೇತಭವನದಲ್ಲಿ ಉನ್ನತ ಶ್ರೇಣಿಯ ಹಲವು ಭಾರತೀಯ-ಅಮೆರಿಕನ್ ಅಧಿಕಾರಿಗಳೊಂದಿಗೆ ದೀಪಾವಳಿ ಆಚರಿಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರವಾಗಿ ಮಾತನಾಡಿದ್ದರು ಎಂದೂ ಹೇಳಿದ್ದರು. ಇದರ ಬೆನ್ನಲ್ಲೇ, ಜೈರಾಂ ರಮೇಶ್ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಕಳೆದ ತಿಂಗಳು ಓವಲ್ ಕಚೇರಿಯಲ್ಲಿ ಭಾರತೀಯ ಅಮೆರಿಕನ್ ಅಧಿಕಾರಿಗಳ ಜೊತೆ ದೀಪಾವಳಿ ಆಚರಿಸಿದ್ದ ಡೊನಾಲ್ಡ್ ಮೋದಿಗೂ ಕರೆ ಮಾಡಿ ಶುಭಾಶಯ ತಿಳಿಸಿದ್ದರು.

ಇದಕ್ಕೆ ಎಕ್ಸ್ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿದ್ದ ಮೋದಿ, ‘ಟ್ರಂಪ್, ನಿಮ್ಮ ಫೋನ್ ಕರೆ ಮತ್ತು ದೀಪಾವಳಿ ಶುಭಾಶಯಗಳಿಗೆ ಧನ್ಯವಾದಗಳು. ಈ ಬೆಳಕಿನ ಹಬ್ಬದಂದು, ನಮ್ಮ ಎರಡೂ ಮಹಾನ್ ಪ್ರಜಾಪ್ರಭುತ್ವಗಳು ಜಗತ್ತನ್ನು ಭರವಸೆಯಿಂದ ಬೆಳಗಿಸುವುದನ್ನು ಮುಂದುವರಿಸಲಿ ಹಾಗೂ ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ನಿಲ್ಲಲಿ’ಎಂದು ಪ್ರತಿಕ್ರಿಯಿಸಿದ್ದರು.