ADVERTISEMENT

ಕರ್ನಾಟಕ ಸಿಎಂರನ್ನು ಕ್ಲರ್ಕ್‌ ರೀತಿ ನಡೆಸಿಕೊಳ್ಳುತ್ತಿದೆ ಕಾಂಗ್ರೆಸ್: ಮೋದಿ

ಬಿಜೆಪಿ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಧಾನಿ ಭಾಷಣ * ಕಾಂಗ್ರೆಸ್ ವಿರುದ್ಧ ಆಕ್ರೋಶ

ಏಜೆನ್ಸೀಸ್
Published 12 ಜನವರಿ 2019, 11:14 IST
Last Updated 12 ಜನವರಿ 2019, 11:14 IST
   

ನವದೆಹಲಿ: ಕರ್ನಾಟಕದಲ್ಲಿ ಮಿತ್ರ ಪಕ್ಷದ ಮುಖ್ಯಮಂತ್ರಿಯನ್ನೇ ಕಾಂಗ್ರೆಸ್ ಗುಮಾಸ್ತನ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿರಾಷ್ಟ್ರೀಯ ಸಮಾವೇಶದಲ್ಲಿ ಶನಿವಾರ ಮಾತನಾಡಿದ ಅವರು, ‘ಮಹಾಮೈತ್ರಿಯ ಮೊದಲ ಸರ್ಕಾರ ಕರ್ನಾಟಕದಲ್ಲಿ ರಚನೆಯಾಗಿದೆ. ಅಲ್ಲಿ ಜೆಡಿಎಸ್‌ ನಾಯಕ, ಮುಖ್ಯಮಂತ್ರಿಯವರನ್ನು ಕಾಂಗ್ರೆಸ್ ಗುಮಾಸ್ತನ ರೀತಿ ನಡೆಸಿಕೊಳ್ಳುತ್ತಿದೆ. ಅಧಿಕಾರಕ್ಕೇರಿದ ಕೆಲವೇ ತಿಂಗಳುಗಳಲ್ಲಿ ಅವರಿಗೆ(ಎಚ್‌.ಡಿ.ಕುಮಾರಸ್ವಾಮಿ) ಕಾಂಗ್ರೆಸ್‌ನಿಂದ ಕಷ್ಟವಾಗುತ್ತಿದೆ’ ಎಂದು ಹೇಳಿದರು.

‘ದೇಶದ ಇತಿಹಾಸದಲ್ಲಿ ವಿಫಲವಾಗಿರುವ ಆಂದೋಲನವೊಂದನ್ನು ‘ಮಹಾಘಟಬಂಧನ (ಮಹಾಮೈತ್ರಿ)’ ಹೆಸರಿನಲ್ಲಿ ಮತ್ತೆ ಚಾಲ್ತಿಗೆ ತರುವ ಪ್ರಕ್ರಿಯೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ. ಈ ಜನರು ‘ಮಜಬೂರ್ ಸರ್ಕಾರ’ ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ಇವರಿಗೆ ತಮ್ಮ ಅಂಗಡಿ ಮುಚ್ಚುವಂತಹ ‘ಮಜಬೂತ್ ಸರ್ಕಾರ’ ಸ್ಥಾಪನೆಯಾಗುವುದು ಬೇಕಿಲ್ಲ’ ಎಂದು ಮೋದಿ ಹೇಳಿದರು.

ADVERTISEMENT

ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರಿದ ಸರ್ಕಾರವೊಂದು ಯಾವುದೇ ಭ್ರಷ್ಟಾಚಾರ ಎಸಗದೇ ಇರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು. ನಮ್ಮ ವಿರುದ್ಧ ಯಾವುದೇ ಕಳಂಕವಿಲ್ಲ ಎಂದೂ ಅವರು ಹೇಳಿದರು.

ದೇಶವನ್ನು ಕತ್ತಲೆಯಲ್ಲಿರಿಸಿದ ಕಾಂಗ್ರೆಸ್:‘ನಮ್ಮ ಹಿಂದಿನ ಸರ್ಕಾರ 10 ವರ್ಷಗಳ ಕಾಲ ದೇಶವನ್ನು ಕತ್ತಲೆಯಲ್ಲಿರಿಸಿತ್ತು. ಮುಖ್ಯವಾದ 10 ವರ್ಷಗಳನ್ನು ಭಾರತವು ಹಗರಣ ಮತ್ತು ಭ್ರಷ್ಟಾಚಾರದಲ್ಲಿ ಕಳೆದುಕೊಂಡಿತ್ತು ಎಂದು ನಾನು ಹೇಳಿದರೆ ತಪ್ಪಾಗಲಾರದು’ ಎಂದು ಕಾಂಗ್ರೆಸ್ ವಿರುದ್ಧ ಮೋದಿ ಹರಿಹಾಯ್ದರು.

ಮಹಿಳಾ ಸಬಲೀಕರಣಕ್ಕಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗಿದೆ. ‘ಬೇಟಿ ಬಚಾವೊ ಬೇಟಿ ಪಢಾವೊ’ ಆಂದೋಲನವನ್ನು ಕೆಲವು ಜನ ತಮಾಷೆ ಮಾಡಿದರು. ಆದರೆ, ದಶಕಗಳಿಂದ ಅಸ್ತಿತ್ವದಲ್ಲಿದ್ದ ತಪ್ಪು ನಂಬಿಕೆಗಳಿಂದ ಸಮಾಜವನ್ನು ಮುಕ್ತಗೊಳಿಸುವಲ್ಲಿ ನಾವು ಬಹಳ ದೂರ ಕ್ರಮಿಸಿದ್ದೇವೆ.

‘ಬಲವಂತದಿಂದ ವಂಚಕರಿಗೆ ಸಾಲ ಕೊಡಿಸಿತ್ತು ಕಾಂಗ್ರೆಸ್’

ಕಳೆದ 60 ವರ್ಷಗಳಲ್ಲಿ ಬ್ಯಾಂಕುಗಳು ₹18 ಲಕ್ಷ ಕೋಟಿ ಸಾಲ ನೀಡಿದ್ದರೆ, ಕಾಂಗ್ರೆಸ್ ಆಡಳಿತದ ಕೊನೆಯ 6 ವರ್ಷಗಳಲ್ಲಿ ₹34 ಲಕ್ಷ ಕೋಟಿ ಸಾಲ ನೀಡಲಾಗಿದೆ. ದೇಶದಲ್ಲಿ ಎರಡು ರೀತಿಯ ಸಾಲ ನೀಡಿಕೆ ಪ್ರಕ್ರಿಯೆ ಚಾಲ್ತಿಯಲ್ಲಿತ್ತು. ಒಂದು ಸಾಮಾನ್ಯ ಪ್ರಕ್ರಿಯೆಯಾಗಿದ್ದರೆ ಮತ್ತೊಂದು ಕಾಂಗ್ರೆಸ್ ಪ್ರಕ್ರಿಯೆ. ಕಾಂಗ್ರೆಸ್ ಪ್ರಕ್ರಿಯೆಯಲ್ಲಿ ವಂಚಕರಿಗೆ ಸಾಲ ನೀಡುವಂತೆ ಬ್ಯಾಂಕುಗಳನ್ನು ಬಲವಂತಪಡಿಸಲಾಗುತ್ತಿತ್ತು ಎಂದು ಮೋದಿ ದೂರಿದರು.

‘ಅಯೋಧ್ಯೆ ವಿಚಾರಣೆಗೆ ಕಾಂಗ್ರೆಸ್ ಅಡ್ಡಿ’

ಅಯೋಧ್ಯೆ ಪ್ರಕರಣದ ವಿಚಾರಣೆಗೆ ತಡೆಯೊಡ್ಡಲು ತಮ್ಮ ವಕೀಲರ ಮೂಲಕ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನು ಸುಳ್ಳು ಆರೋಪಗಳ ಮೂಲಕ ಮಹಾಭಿಯೋಗಕ್ಕೆ ಒಳಪಡಿಸಲೂ ಕಾಂಗ್ರೆಸ್ ಸಿದ್ಧವಿದೆ. ಪ್ರತಿಯೊಂದು ವಿಷಯದಲ್ಲಿಯೂ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವ ಕಾಂಗ್ರೆಸ್‌ನ ಮನಸ್ಥಿತಿ ಎಂತಹದ್ದು ಎಂದು ಮೋದಿ ಪ್ರಶ್ನಿಸಿದರು.

‘ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಛತ್ತೀಸಗಡ ರಾಜ್ಯಗಳು ಸಿಬಿಐ ಅಧಿಕಾರಿಗಳ ಪ್ರವೇಶಕ್ಕೆ ನಿಷೇಧ ಹೇರಿವೆ. ಯಾವ ತಪ್ಪು ಮಾಡಿರುವುದಕ್ಕೆ ಅವರಿಗೆ ಆ ರೀತಿಯ ಭಯ ಕಾಡುತ್ತಿದೆ? ಇಂದು ಅವರು ಸಿಬಿಐಯನ್ನು ಒಪ್ಪುವುದಿಲ್ಲ. ನಾಳೆ ಸೇನೆ, ಪೊಲೀಸ್, ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ, ಸಿಎಜಿ ಎಲ್ಲವೂ ಸರಿಯಿಲ್ಲ ಎನ್ನಬಹುದು; ಅವರು ಮಾತ್ರ ಸರಿ’ ಎಂದು ಕಾಂಗ್ರೆಸ್‌ ವಿರುದ್ಧ ಮೋದಿ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.