ADVERTISEMENT

ವಿಕಸಿತ ಭಾರತದ ಅಭಿವೃದ್ಧಿಗೆ ಸಲಹೆ ಆಹ್ವಾನ: ನಾಗರಿಕರಿಗೆ PM ಮೋದಿ ಬಹಿರಂಗ ಪತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮಾರ್ಚ್ 2024, 14:54 IST
Last Updated 16 ಮಾರ್ಚ್ 2024, 14:54 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ಬಹಿರಂಗ ಪತ್ರ ಬರೆದಿದ್ದು, ಕೇಂದ್ರ ಸರ್ಕಾರದ ಅಭಿವೃದ್ಧಿ ಹೊಂದಿದ ಭಾರತ (ವಿಕಸಿತ ಭಾರತ್) ನಿರ್ಮಾಣಕ್ಕಾಗಿ ಸಲಹೆಗಳನ್ನು ಸಲ್ಲಿಸಲು ಮನವಿ ಮಾಡಿಕೊಂಡಿದ್ದಾರೆ.

ಇದು ವಾಟ್ಸ್‌ಆ್ಯಪ್ ಮೂಲಕ ನಾಗರಿಕರ ಮೊಬೈಲ್‌ಗೆ ಕಳುಹಿಸಲಾಗಿದೆ. 

ನನ್ನ ಪರಿವಾರದ ಜನರೇ... ಎಂದು ಪತ್ರ ಆರಂಭಿಸಿರುವ ಪ್ರಧಾನಿ ಮೋದಿ ಅವರು, ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಲ್ಲಿ (2014 ಹಾಗೂ 2019) ಜಾರಿಗೆ ತಂದ ಯೋಜನೆಗಳನ್ನು ವಿವರಿಸಿದ್ದಾರೆ. ಜತೆಗೆ ಭವಿಷ್ಯದ ಭಾರತದ ನಿರ್ಮಾಣಕ್ಕೆ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಲು ಜನರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ.

ADVERTISEMENT

‘ದೇಶವನ್ನು ಪ್ರಗತಿಯ ಪಥದಲ್ಲಿ ಸಾಧಿಸಲು, ಜನರ ಜೀವನ ಮಟ್ಟ ಸುಧಾರಣೆ, ಬಡವರು, ರೈತರು, ಯುವಕರು ಹಾಗೂ ಮಹಿಳೆಯರ ಸಬಲೀಕರಣಕ್ಕೆ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದರಲ್ಲಿ ಪ್ರಧಾನಮಂತ್ರಿ ಆವಾಸ ಯೋಜನಾ, ಪ್ರತಿ ಮನೆಗೂ ವಿದ್ಯುತ್, ನೀರು ಹಾಗೂ ಎಲ್‌ಪಿಜಿ, ಆಯುಷ್ಮಾನ್ ಭಾರತದ ಮೂಲಕ ಉಚಿತ ವೈದ್ಯಕೀಯ ಚಿಕಿತ್ಸೆ, ರೈತರಿಗೆ ಆರ್ಥಿಕ ನೆರವು, ಮಾತೃ ವಂದನಾ ಯೋಜನೆ ಮೂಲಕ ಮಹಿಳೆಯರಿಗೆ ನೆರವು ನೀಡಲಾಗುತ್ತಿದೆ’ ಎಂದಿದ್ದಾರೆ.

‘ಪರಂಪರೆ ಹಾಗೂ ಆಧುನಿಕತೆಯೊಂದಿಗೆ ದೇಶವು ಮುನ್ನಡೆಯುತ್ತಿದೆ. ಕಳೆದ ಒಂದು ದಶಕದಲ್ಲಿ ಮುಂದಿನ ತಲೆಮಾರಿಗೆ ಅಗತ್ಯವಿರುವ ಮೂಲಸೌಕರ್ಯ ನಿರ್ಮಾಣ ಕಾರ್ಯಗಳನ್ನು ನಡೆದಿರುವುದನ್ನು ನೋಡಿದ್ದೇವೆ. ದೇಶದ ಶ್ರೀಮಂತ ಪರಂಪರೆ ಹಾಗೂ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿ ಈಗ ಮುಂದೆ ಸಾಗಬೇಕಿದೆ. ಈ ನಿಟ್ಟಿನಲ್ಲಿ ಜಿಎಸ್‌ಟಿ ಜಾರಿ, 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದು, ತ್ರಿವಳಿ ತಲಾಖ್ ಕಾನೂನು ರದ್ದು, ನಾರಿ ಶಕ್ತಿ ವಂದನಾ ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇವೆಲ್ಲವೂ ದೇಶದ ಜನರ ಅಭೂತಪೂರ್ವ ಬೆಂಬಲದಿಂದ ಸಾಧ್ಯವಾಗಿದೆ’ ಎಂದು ಪ್ರಧಾನಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

‘ದೇಶವನ್ನು ಮತ್ತಷ್ಟು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಲು ನಿಮ್ಮೆಲ್ಲರ ಸಲಹೆ ಅಗತ್ಯ. ಆ ಮೂಲಕ ನಾವೆಲ್ಲರೂ ಸೇರಿ ದೇಶವನ್ನು ಪ್ರಗತಿಯ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ ಎಂಬ ಆತ್ಮವಿಶ್ವಾಸ ನನ್ನದು’ ಎಂದೆನ್ನುವ ಮೂಲಕ ಪತ್ರ ಕೊನೆಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.