ADVERTISEMENT

ಕೋವಿಡ್ ಲಸಿಕೆ ತಯಾರಿಕೆಗೆ ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಪ್ರೇರಣೆ: ಸಚಿವ

ಪಿಟಿಐ
Published 28 ಆಗಸ್ಟ್ 2021, 12:00 IST
Last Updated 28 ಆಗಸ್ಟ್ 2021, 12:00 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಜಬಲ್‌ಪುರ (ಮಧ್ಯಪ್ರದೇಶ): ‘ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನಿಗಳು ಮತ್ತು ವೈದ್ಯರಿಗೆ ವೈದ್ಯಕೀಯ ಸಂಶೋಧನೆಗೆ ಪ್ರೇರಣೆ ನೀಡಿದ್ದರಿಂದ ಭಾರತದಲ್ಲಿ ಕೋವಿಡ್‌ ನಿರೋಧಕ ಲಸಿಕೆ ಅಭಿವೃದ್ಧಿಪಡಿಸಲು ಸಾಧ್ಯವಾಯಿತು’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಖಾಟಿಕ್ ಶನಿವಾರ ಹೇಳಿದ್ದಾರೆ.

ಜಬಲ್‌ಪುರದಲ್ಲಿ ‘ಜನ ಆಶೀರ್ವಾದ ಯಾತ್ರೆ’ಗೆ ಚಾಲನೆ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಇದೇ ಮೊದಲ ಬಾರಿಗೆ ನಾವು ವೈರಸ್ ವಿರುದ್ಧ ಲಸಿಕೆಗಳನ್ನು ಖರೀದಿಸಲು ಬೇರೆ ದೇಶಗಳನ್ನು ಅವಲಂಬಿಸುವ ಸಂದರ್ಭ ಎದುರಾಗಿಲ್ಲ’ ಎಂದರು.

‘ಮೋದಿ ಅವರು ವಿಜ್ಞಾನಿಗಳು ಮತ್ತು ವೈದ್ಯರಿಗೆ ವೈದ್ಯಕೀಯ ಸಂಶೋಧನೆ ನಡೆಸಲು ಪ್ರೇರಣೆ ನೀಡಿದರು. ಇದರಿಂದಾಗಿ ದೇಶದಲ್ಲಿ ಕೊರೊನಾ ವೈರಸ್ ಪ್ರತಿರೋಧಿಸುವ ಲಸಿಕೆಯ ಅಭಿವೃದ್ಧಿ ಸಾಧ್ಯವಾಯಿತು. ಇದಕ್ಕೆ ವ್ಯತಿರಿಕ್ತವಾಗಿ ಹೇಳುವುದಾದರೆ ಬಹುತೇಕ ದೇಶಗಳಲ್ಲಿ ಪೋಲಿಯೋ ವಿರೋಧಿ ಲಸಿಕೆ ಬಳಕೆ ಪೂರ್ಣಗೊಂಡ ನಾಲ್ಕೈದು ವರ್ಷಗಳ ಬಳಿಕ ಭಾರತದಲ್ಲಿ ಪೋಲಿಯೋ ವಿರೋಧಿ ಲಸಿಕೆ ಆರಂಭಿಸಲಾಯಿತು’ ಎಂದು ಹೇಳಿದರು.

ADVERTISEMENT

‘ದೇಶದಾದ್ಯಂತ ಇದುವರೆಗೆ ಸುಮಾರು 60 ಕೋಟಿ ಕೋವಿಡ್ ನಿರೋಧಕ ಲಸಿಕೆಗಳನ್ನು ನೀಡಲಾಗಿದೆ’ ಎಂದು ಮಾಹಿತಿ ನೀಡಿದ ಅವರು, ‘ಕೇಂದ್ರ ಸರ್ಕಾರವು ₹ 100 ಲಕ್ಷ ಕೋಟಿ ಮೌಲ್ಯದ ‘ಅಮೃತ್ ಕಾಲ್‌’ (ಅಮೃತ ಕಾಲ) ಹೆಸರಿನಲ್ಲಿ ಮಾರ್ಗಸೂಚಿಯೊಂದನ್ನು ರಚಿಸಿದೆ. ಇದರ ಪ್ರಕಾರ ಮುಂದಿನ 25 ವರ್ಷಗಳಲ್ಲಿ ಭಾರತದ ರಸ್ತೆಗಳು, ಕೈಗಾರಿಕೆ ಮತ್ತು ರೈಲ್ವೆ ವಲಯಕ್ಕೆ ಮೂಲಸೌಕರ್ಯಗಳನ್ನು ಬಲಪಡಿಸಲು ಮೂಲಕ ಸ್ವಾವಲಂಬಿ ಮಾಡುವ ದೂರದೃಷ್ಟಿಯನ್ನು ಪ್ರಧಾನಿ ಹೊಂದಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.