ADVERTISEMENT

ರಾಜೀವ್‌ ಗಾಂಧಿ ಜನ್ಮದಿನ: ಪ್ರಧಾನಿ ಮೋದಿ, ರಾಹುಲ್‌ ಸೇರಿ ಗಣ್ಯರಿಂದ ಸ್ಮರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಆಗಸ್ಟ್ 2022, 6:53 IST
Last Updated 20 ಆಗಸ್ಟ್ 2022, 6:53 IST
   

ನವದೆಹಲಿ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಗಣ್ಯರು ಅವರ ಸ್ಮರಣೆ ಮಾಡಿ, ಗೌರವ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ರಾಬರ್ಟ್‌ ವಾದ್ರಾ ಸೇರಿದಂತೆ ಕುಟುಂಬಸ್ಥರು ಹಾಗೂ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್, ಪಿ.ಚಿದಂಬರಂ, ಮಲ್ಲಿಕಾರ್ಜುನ ಖರ್ಗೆ ಅವರು ಸಮಾಧಿ ಸ್ಥಳ ‘ವೀರ ಭೂಮಿ’ಗೆ ತೆರಳಿ ಗೌರವ ನಮನ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಗಣ್ಯರು ರಾಜೀವ್ ಗಾಂಧಿ ಅವರು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದ್ದಾರೆ.

ADVERTISEMENT

‘ನಮ್ಮ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಜನ್ಮದಿನದ ಅಂಗವಾಗಿ ನಮನ ಸಲ್ಲಿಸುತ್ತೇವೆ’ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

‘ಅಪ್ಪ, ನೀವು ಪ್ರತಿ‌ಕ್ಷಣವೂ ನನ್ನೊಂದಿಗಿದ್ದೀರಿ, ನನ್ನ ಹೃದಯದಲ್ಲಿ ನೆಲೆಸಿದ್ದೀರಿ. ಈ‌ ದೇಶಕ್ಕಾಗಿ ನೀವು ಕಂಡ ಕನಸನ್ನು ಸಾಕಾರಗೊಳಿಸಲು ನಾನು ನಿರಂತರವಾಗಿ ಪ್ರಯತ್ನಿಸುತ್ತೇನೆ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

'ಸಂಪರ್ಕ/ ಕಂಪ್ಯೂಟರ್ ಕ್ಷೇತ್ರದಲ್ಲಿ ಕ್ರಾಂತಿ, ಮತದಾನದ ವಯಸ್ಸು 18ಕ್ಕೆ ಇಳಿಕೆ, ಪಂಚಾಯತ್ ರಾಜ್ ವ್ಯವಸ್ಥೆ, ಸಾಮೂಹಿಕ ಲಸಿಕಾ ಅಭಿಯಾನ… ಸಾಧನೆಗಳ ಮೂಲಕ ಜನಮನದಲ್ಲಿ ಶಾಶ್ವತವಾಗಿ ನೆಲೆಸಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹುಟ್ಟುಹಬ್ಬದ ದಿನ ಗೌರವ ಮತ್ತು ಕೃತಜ್ಞತೆಯಿಂದ ಸ್ಮರಿಸೋಣ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ನಾನು ರಾಜಕೀಯ ಆಯ್ಕೆ ಮಾಡಿಕೊಳ್ಳಲು ಕಾರಣ ಮಾಜಿ ಪ್ರಧಾನಿಗಳಾದ ರಾಜೀವ್‌ ಗಾಂಧಿ. ನೂತನ ಆಲೋಚನೆಗಳ ಮೂಲಕ ದೇಶ ಸೇವೆ ಮಾಡಲು ನನ್ನಂಥ ಅನೇಕರಿಗೆ ಅವರು ಪ್ರೇರೇಪಿಸಿದ್ದಾರೆ. ಸ್ವತಃ ಯುವ ಪ್ರಧಾನಿಯಾಗಿದ್ದ ಅವರು, ಯುವಕರಲ್ಲಿರುವ ಸಾಮರ್ಥ್ಯವನ್ನು ಬಳಸಿಕೊಂಡು ದೇಶದ ಬದಲಾವಣೆಗೆ ನಾಂದಿ ಹಾಡಿದರು. ಶ್ರೀಯುತರ ಜಯಂತಿಯಂದು ಗೌರವ ನಮನಗಳು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.