ಪ್ರಧಾನಿ ನರೇಂದ್ರ ಮೋದಿ
ಇಟಾನಗರ: ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ₹5,125 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಇಟಾನಗರದ ಇಂದಿರಾಗಾಂಧಿ ಉದ್ಯಾನದಲ್ಲಿ ನಡೆದ ಸಮಾರಂಭದಲ್ಲಿ ಮೋದಿ ಅವರು, ಶಿ ಯೋಮಿ ಜಿಲ್ಲೆಯಲ್ಲಿ ಹರಿಯುವ ಯಾರ್ಜೆಪ್ ನದಿಯಲ್ಲಿ ಅಭಿವೃದ್ಧಿಪಡಿಸಲಾಗುವ ಟಾಟೊ–ಐ ಮತ್ತು ಎಚ್‌ಇಒ ಜಲವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
186 ಮೆಗಾವ್ಯಾಟ್ ಸಾಮರ್ಥ್ಯದ ಟಾಟೊ-ಐ ಯೋಜನೆಯನ್ನು ಅರುಣಾಚಲ ಪ್ರದೇಶ ಸರ್ಕಾರ ಮತ್ತು ಈಶಾನ್ಯ ವಿದ್ಯುತ್ ನಿಗಮ ಲಿಮಿಟೆಡ್ (NEEPCO) ಜಂಟಿಯಾಗಿ ₹1,750 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಇದು ವಾರ್ಷಿಕವಾಗಿ 802 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ.
240 ಮೆಗಾವ್ಯಾಟ್ ಎಚ್‌ಇಒ ಯೋಜನೆಯನ್ನು ರಾಜ್ಯ ಸರ್ಕಾರ ಮತ್ತು ಈಶಾನ್ಯ ವಿದ್ಯುತ್ ನಿಗಮ ಲಿಮಿಟೆಡ್ ₹1,939 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದ್ದು, ಇದು ಪ್ರತಿ ವರ್ಷ 100 ಕೋಟಿ ಯೂನಿಟ್ ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ.
ರಸ್ತೆ ಸಂಪರ್ಕ, ಆರೋಗ್ಯ, ಅಗ್ನಿಶಾಮಕ ಇಲಾಖೆಗೆ ಸಂಬಂಧಿಸಿದಂತೆ ₹1,290 ಕೋಟಿಗೂ ಹೆಚ್ಚು ಮೌಲ್ಯದ ಹಲವು ಮೂಲಸೌಕರ್ಯ ಯೋಜನೆಗಳನ್ನು ಮೋದಿ ಅವರು ಉದ್ಘಾಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.