ADVERTISEMENT

ವಸತಿ ಯೋಜನೆ ಅನುಷ್ಠಾನಕ್ಕೆ ಅಡ್ಡಿಪಡಿಸುತ್ತಿದ್ದ ಎಸ್‌ಪಿ ಸರ್ಕಾರ: ಮೋದಿ ವಾಗ್ದಾಳಿ

ಪಿಎಂಎವೈ ಯೋಜನೆಯ 75 ಸಾವಿರ ಫಲಾನುಭವಿಗಳಿಗೆ ನೂತನ ಮನೆಗಳ ಕೀಲಿ ಹಸ್ತಾಂತರ

ಪಿಟಿಐ
Published 5 ಅಕ್ಟೋಬರ್ 2021, 9:58 IST
Last Updated 5 ಅಕ್ಟೋಬರ್ 2021, 9:58 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಲಖನೌ: ‘ಉತ್ತರ ಪ್ರದೇಶದಲ್ಲಿ ಹಿಂದೆ ಆಳ್ವಿಕೆ ನಡೆಸಿದ ಸರ್ಕಾರ ಕೇಂದ್ರದ ವಸತಿ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿಯುಂಟು ಮಾಡುವ ಮೂಲಕ, ರಾಜ್ಯದ ಬಡವರಿಗೆ ಮನೆ ನಿರ್ಮಿಸಿಕೊಡಲು ಆಸಕ್ತಿ ತೋರಲಿಲ್ಲ‘ ಎಂದು ಪ್ರಧಾನಿ ನರೇಂದ್ರ ಮೋದಿ ಹಿಂದಿನ ಸಮಾಜವಾದಿ ಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಗಳವಾರ ಪಿಎಂಎವೈ–ಯು ಯೋಜನೆಯ 75 ಸಾವಿರ ಫಲಾನುಭವಿಗಳಿಗೆ ವರ್ಚುವಲ್‌ ರೂಪದಲ್ಲಿ ಕೀಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, ‘2017ಕ್ಕೂ ಹಿಂದೆ, ಉತ್ತರ ಪ್ರದೇಶಕ್ಕೆ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (ಪಿಎಂಎವೈ) ಬಡವರಿಗೆ ಮನೆ ನಿರ್ಮಿಸಿಕೊಡಲು ₹18 ಸಾವಿರ ಕೋಟಿ ಮಂಜೂರು ಮಾಡಿತ್ತು. ಆದರೆ, ಆ ಸರ್ಕಾರ 18 ಮನೆಗಳನ್ನೂ ನಿರ್ಮಾಣ ಮಾಡಲಿಲ್ಲ‘ ಎಂದು ಆರೋಪಿಸಿದರು.

‘ಆದರೆ, ಈಗ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಇದೇ ಯೋಜನೆಯಡಿ ಉತ್ತರ ಪ್ರದೇಶದಲ್ಲಿ 9 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿದೆ. 14 ಲಕ್ಷ ಮನೆಗಳು ನಿರ್ಮಾಣ ಹಂತದಲ್ಲಿವೆ‘ ಎಂದು ಮೋದಿ ಹೇಳಿದರು.

‘ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ರಾಜ್ಯದ ಮೂರು ಕೋಟಿ ಬಡ ಕುಟುಂಬಗಳನ್ನು ಲಕ್ಷಾಧಿಪತಿಗಳನ್ನಾಗಿ ಮಾಡಿದೆ‘ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.