ADVERTISEMENT

ಉತ್ತರ ಪ್ರದೇಶದಲ್ಲಿ ಚಾವಣಿ ಕುಸಿದು 18 ಮಂದಿ ಸಾವು: ಪ್ರಧಾನಿ ಸಂತಾಪ

ಏಜೆನ್ಸೀಸ್
Published 3 ಜನವರಿ 2021, 14:22 IST
Last Updated 3 ಜನವರಿ 2021, 14:22 IST
ಕಾರ್ಯಾಚರಣೆಯಲ್ಲಿ ತೊಡಗಿರುವ ಉತ್ತರ ಪ್ರದೇಶ ಪೊಲೀಸರು
ಕಾರ್ಯಾಚರಣೆಯಲ್ಲಿ ತೊಡಗಿರುವ ಉತ್ತರ ಪ್ರದೇಶ ಪೊಲೀಸರು   

ಗಾಜಿಯಾಬಾದ್: ಉತ್ತರ ಪ್ರದೇಶದ ಮುರಾದ್‌ನಗರದಲ್ಲಿ ಚಾವಣಿ ಕುಸಿದು 18 ಮಂದಿ ಮೃತಪಟ್ಟ ಘಟನೆಯನ್ನು 'ದುರದೃಷ್ಟಕರ' ಎಂದು ಪ್ರಧಾನಿ ಮೋದಿ ಕರೆದಿದ್ದಾರೆ.

ದುರ್ಘಟನೆಯಲ್ಲಿ ಸಾವಿಗೀಡಾದವರ ಕುಟುಂಬ ಸದಸ್ಯರಿಗೆ ಟ್ವೀಟ್‌ ಮೂಲಕ ಸಂತಾಪ ಸೂಚಿಸಿರುವ ಅವರು, 'ಉತ್ತರ ಪ್ರದೇಶದ ಮುರಾದ್‌ನಗರದಲ್ಲಿ ನಡೆದ ದುರದೃಷ್ಟಕರ ಘಟನೆ ನನಗೆ ತುಂಬಾ ದುಃಖ ತಂದಿದೆ. ರಾಜ್ಯ ಸರ್ಕಾರ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಸಂಬಂಧಿಕರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಹಾಗೆಯೇ ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತೇನೆ' ಎಂದು ಹೇಳಿದ್ದಾರೆ.

ಜೋರಾಗಿ ಬೀಳುತ್ತಿದ್ದ ಮಳೆಯಿಂದ ರಕ್ಷಣೆ ಪಡೆಯಲು ಸ್ಮಶಾನದ ಸಂಕೀರ್ಣವೊಂದರ ಚಾವಣಿಯಲ್ಲಿ 25 ಮಂದಿ ಆಶ್ರಯ ಪಡೆದಿದ್ದರು. ಮಳೆಗೆ ಚಾವಣಿ ಕುಸಿದು 18 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಬಹುತೇಕರು ರಾಮ್ ಧವನ್ ಎನ್ನುವವರ ಶವಸಂಸ್ಕಾರಕ್ಕೆ ಬಂದಿದ್ದ ಸಂಬಂಧಿಕರು. ಶವಸಂಸ್ಕಾರ ನಡೆಯುತ್ತಿದ್ದ ವೇಳೆಯೇ ಈ ದುರ್ಘಟನೆ ಸಂಭವಿಸಿದೆ.

ADVERTISEMENT

ಸ್ಥಳದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದ್ದು, ಮೃತದೇಹಗಳನ್ನು ಅವಶೇಷಗಳಿಂದ ಹೊರಕ್ಕೆ ತೆಗೆಯುವ ಕೆಲಸ ನಡೆಯುತ್ತಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗಾಜಿಯಾಬಾದ್ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ಇರಾಜ್ ರಾಜಾ ತಿಳಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂತಾಪ ವ್ಯಕ್ತಪಡಿಸಿದ್ದು, ‘ಮೃತರ ಸಂಬಂಧಿಕರಿಗೆ ತಲಾ ₹ 2ಲಕ್ಷ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.