ADVERTISEMENT

ಕಾರ್ಗಿಲ್ ವಿಜಯೋತ್ಸವ: ಹುತಾತ್ಮ ಯೋಧರಿಗೆ ದೇಶದಾದ್ಯಂತ ಗೌರವ ಸಲ್ಲಿಕೆ

ಯೋಧರ ತ್ಯಾಗ, ಬಲಿದಾನ, ಶೌರ್ಯ ಸ್ಮರಣೆ

ಪಿಟಿಐ
Published 26 ಜುಲೈ 2021, 6:18 IST
Last Updated 26 ಜುಲೈ 2021, 6:18 IST
ಪಟ್ನಾದಲ್ಲಿ ಎನ್‌ಸಿಸಿ ಕೆಡೆಟ್‌ಗಳು ಯುದ್ಧ ಸ್ಮಾರಕದಲ್ಲಿ ಪುಷ್ಪ ಅರ್ಪಿಸುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು   ಪಿಟಿಐ ಚಿತ್ರ
ಪಟ್ನಾದಲ್ಲಿ ಎನ್‌ಸಿಸಿ ಕೆಡೆಟ್‌ಗಳು ಯುದ್ಧ ಸ್ಮಾರಕದಲ್ಲಿ ಪುಷ್ಪ ಅರ್ಪಿಸುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು   ಪಿಟಿಐ ಚಿತ್ರ   

ನವದೆಹಲಿ: ಕಾರ್ಗಿಲ್‌ ಯುದ್ಧದಲ್ಲಿ ವಿಜಯ ಸಾಧಿಸಿದ 22ನೇ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಹುತಾತ್ಮ ಯೋಧರಿಗೆ ದೇಶದಾದ್ಯಂತ ಗೌರವ ಸಲ್ಲಿಸಲಾಯಿತು.

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಗಣ್ಯರು, ರಾಜಕೀಯ ಮುಖಂಡರು, ನಾಗರಿಕರು ಹುತಾತ್ಮ ಯೋಧರನ್ನು ಸ್ಮರಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.

ಉತ್ತರ ಕಾಶ್ಮೀರದ ಬಾರಾಮುಲ್ಲಾ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಗೌರವ ಸಲ್ಲಿಸಿದರು.

ADVERTISEMENT

ಹವಾಮಾನ ವೈಪರೀತ್ಯದಿಂದಾಗಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಲಡಾಖ್‌ನಲ್ಲಿನ ದ್ರಾಸ್‌ ಭೇಟಿಯನ್ನು ರದ್ದುಪಡಿಸಿದರು. ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಷ್ಟ್ರಪತಿ ಅವರು ದ್ರಾಸ್‌ಗೆ ಭೇಟಿ ನೀಡಲು ಉದ್ದೇಶಿಸಿದ್ದರು.

ಹುತಾತ್ಮ ಯೋಧರನ್ನು ಸ್ಮರಿಸಿ ಟ್ವೀಟ್‌ ಮಾಡಿರುವ ಪ್ರಧಾನಿ ಅವರು, ‘ಹುತಾತ್ಮರಾಗಿರುವ ಯೋಧರು ನಮಗೆ ಪ್ರೇರಣೆಯಾಗಿದ್ದಾರೆ. ಯೋಧರ ತ್ಯಾಗ ಮತ್ತು ಶೌರ್ಯವನ್ನು ದೇಶವು ಸ್ಮರಿಸುತ್ತದೆ’ ಎಂದು ಹೇಳಿದ್ದಾರೆ.

‘ಸಮರ್ಪಣಾ ಭಾವದಿಂದ ಮತ್ತು ಪರಾಕ್ರಮದಿಂದ ನಮ್ಮ ದೇಶವನ್ನು ರಕ್ಷಿಸುವ ಸಂದರ್ಭದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ’ ಎಂದು ಹೇಳಿದ್ದಾರೆ.

‘ನಮ್ಮ ತ್ರಿವರ್ಣ ಧ್ವಜದ ಗೌರವ ಮತ್ತು ಘನತೆಯನ್ನು ಎತ್ತಿ ಹಿಡಿಯಲು ತಮ್ಮ ಬದುಕನ್ನೇ ತ್ಯಾಗ ಮಾಡಿದ ಪ್ರತಿಯೊಬ್ಬ ಯೋಧರಿಗೆ ಹೃದಯಪೂರ್ವಕ ಶ್ರದ್ಧಾಂಜಲಿ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

‘ದೇಶದ ಭದ್ರತೆಗಾಗಿ ಯೋಧರ ಮತ್ತು ಅವರ ಕುಟುಂಬದ ತ್ಯಾಗವನ್ನು ನಾವು ಸದಾ ಸ್ಮರಿಸುತ್ತೇವೆ’ ಎಂದು ಹೇಳಿದ್ದಾರೆ.

1999ರಲ್ಲಿ ಪಾಕಿಸ್ತಾನದ ಸೇನೆ ಆಕ್ರಮಿಸಿಕೊಂಡಿದ್ದ ಕಾರ್ಗಿಲ್‌ನ ಪ್ರದೇಶಗಳನ್ನು ಭಾರತೀಯ ಯೋಧರು ಮರಳಿ ವಶಕ್ಕೆ ಪಡೆದಿದ್ದರು. ಈ ಕಾರ್ಯಾಚರಣೆಗೆ ‘ಆಪರೇಷನ್‌ ವಿಜಯ್’ ಎಂದು ಹೆಸರಿಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.