ADVERTISEMENT

ವರ್ಷದ ಕೊನೆಯ ದಿನ 'ಕೋವಿಡ್-19' ಹೋರಾಟಗಾರರನ್ನು ಸ್ಮರಿಸಿದ ಪ್ರಧಾನಿ ಮೋದಿ

ಏಜೆನ್ಸೀಸ್
Published 31 ಡಿಸೆಂಬರ್ 2020, 9:35 IST
Last Updated 31 ಡಿಸೆಂಬರ್ 2020, 9:35 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: 2020ನೇ ವರ್ಷದ ಕೊನೆಯ ದಿನದಂದು ಕೋವಿಡ್-19 ಮಹಾಮಾರಿ ವಿರುದ್ಧ ಹೋರಾಡಿರುವ ದೇಶದ ಮುಂಚೂಣಿಯಯೋಧರನ್ನು(ಕೋವಿಡ್‌ ವಾರಿಯರ್ಸ್‌) ಸ್ಮರಿಸಿರುವ ಪ್ರಧಾನಿ ನರೇಂದ್ರ ಮೋದಿ, 'ಅವರೆಲ್ಲರಿಗೂ ನನ್ನ ನಮನಗಳು' ಎಂದಿದ್ದಾರೆ.

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಏಮ್ಸ್) ವಿಡಿಯೊ ಕಾನ್ಫೆರನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿರುವ ನರೇಂದ್ರ ಮೋದಿ, 'ವರ್ಷದ ಕೊನೆಯ ದಿನದಂದು ದೇಶದ ಲಕ್ಷಾಂತರ ವೈದ್ಯರು, ಆರೋಗ್ಯ ಕಾರ್ಯಕರ್ತರು, ಶುಚಿತ್ವ ಕಾರ್ಮಿಕರು ಹಾಗೂ ಇತರೆ ಮುಂಚೂಣಿಯ ಯೋಧರನ್ನು ನಾನು ವಂದಿಸುತ್ತೇನೆ' ಎಂದು ಹೇಳಿದ್ದಾರೆ.

ಸಂಕಷ್ಟದ ಸಮಯದಲ್ಲಿ ಕರ್ತವ್ಯದಲ್ಲಿ ನಿರತರಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ದೇಶದ ಕೋವಿಡ್‌ ವಾರಿಯರ್‌ಗಳಿಗೆ ನಾನು ನಮಿಸುತ್ತೇನೆ. ನಾವೆಲ್ಲರೂ ಒಗ್ಗೂಡಿದಾಗ ಅತ್ಯಂತ ಕಷ್ಟಕರವಾದ ಬಿಕ್ಕಟ್ಟನ್ನು ಎಷ್ಟು ಪರಿಣಾಮಕಾರಿಯಾಗಿ ನಿಭಾಯಿಸಬಹುದು ಎಂಬುದನ್ನು ಈ ವರ್ಷದಲ್ಲಿ ತೋರಿಸಿಕೊಟ್ಟಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ADVERTISEMENT

'ಆರೋಗ್ಯವೇ ಸಂಪತ್ತು' ಎಂಬುದನ್ನು 2020ನೇ ವರ್ಷ ನಮಗೆ ಚೆನ್ನಾಗಿ ಕಲಿಸಿಕೊಟ್ಟಿದೆ. ಇದು ಸವಾಲುಗಳಿಂದ ಕೂಡಿದ ವರ್ಷವಾಗಿತ್ತು. ಈ ವರ್ಷಕ್ಕೆ ಬೀಳ್ಕೊಡುವಾಗ ಆರೋಗ್ಯ ಸೌಲಭ್ಯದಲ್ಲಿ ಎದುರಾದ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ಅವುಗಳಿಗೆ ಈ ರಾಷ್ಟ್ರೀಯ ಆರೋಗ್ಯ ಸೌಲಭ್ಯ ಕೇಂದ್ರ ಉತ್ತರವಾಗಿದ್ದು, ಇದು ಹೊಸ ವರ್ಷದ ಆದ್ಯತೆಯನ್ನು ಸೂಚಿಸುತ್ತದೆ ಎಂದಿದ್ದಾರೆ.

ಆರೋಗ್ಯ ತೊಂದರೆ ಎದುರಾದಾಗ ಜೀವನದ ಪ್ರತಿಯೊಂದು ಅಂಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದು ಕುಟುಂಬ ಮಾತ್ರವಲ್ಲದೆ ಇಡೀ ಸಾಮಾಜಿಕ ವಲಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನುಡಿದಿದ್ದಾರೆ.

ಇಂದು (ಗುರುವಾರ) ವೈದ್ಯಕೀಯ ಮೂಲಸೌಕರ್ಯಗಳಲ್ಲಿ ಮತ್ತೊಂದು ಕೇಂದ್ರ ಸೇರ್ಪಡೆಗೊಳ್ಳುತ್ತಿದೆ. ದೇಶದಲ್ಲಿ ಕೋವಿಡ್-19 ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದಿನ ವರ್ಷ ಅತಿ ದೊಡ್ಡ ಲಸಿಕೆ ವಿತರಣೆಯನ್ನು ನಡೆಸಲು ನಾವು ತಯಾರಿ ನಡೆಸುತ್ತಿದ್ದೇವೆ ಎಂದು ಹೇಳಿದರು.

ರಾಜ್‌ಕೋಟ್‌‌ನ ಏಮ್ಸ್ ಆಸ್ಪತ್ರೆಯನ್ನು 200 ಎಕರೆ ಪ್ರದೇಶದಲ್ಲಿ 1200 ಕೋಟಿ ರೂ. ಹೂಡಿಕೆಯೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.