ADVERTISEMENT

ಭಾರತದೊಂದಿಗೆ ಯುರೋಪಿಯನ್‌ ಪಾಲುದಾರರ ಪಾತ್ರ ಮಹತ್ವದ್ದು: ಪ್ರಧಾನಿ ಮೋದಿ

ಮೇ 2ರಿಂದ ಯುರೋಪ್‌ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ

ಪಿಟಿಐ
Published 1 ಮೇ 2022, 11:01 IST
Last Updated 1 ಮೇ 2022, 11:01 IST
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)   

ನವದೆಹಲಿ: ‘ಯುರೋಪ್‌ ಹಲವು ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಪ್ರವಾಸ ಕೈಕೊಳ್ಳಲಾಗುತ್ತಿದೆ. ಯುರೋಪಿಯನ್‌ ಪಾಲುದಾರರೊಂದಿಗೆ ಸಹಕಾರವನ್ನು ಬಲಪಡಿಸುವ ಉದ್ದೇಶವನ್ನು ಪ್ರಸ್ತುತ ಭೇಟಿ ಹೊಂದಿದೆ’ ಎಂದು ಜರ್ಮನಿ, ಡೆನ್ಮಾರ್ಕ್‌ ಮತ್ತು ಫ್ರಾನ್ಸ್‌ಗೆ ಪ್ರವಾಸ ಹೊರಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರ ಆಹ್ವಾನದ ಮೇರೆಗೆ ಮೇ 2 ರಂದು ಬರ್ಲಿನ್‌ಗೆ ಭೇಟಿ ನೀಡುವುದಾಗಿ ಪ್ರಧಾನಿ ಮೋದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಮೇ 3–4 ರಂದುನಡೆಯುವ ದ್ವಿಪಕ್ಷೀಯ ಮಾತುಕತೆಯಲ್ಲಿ ಹಾಗೂ ಭಾರತ-ನಾರ್ಡಿಕ್ ಎರಡನೇ ಶೃಂಗಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.

ಭಾರತಕ್ಕೆ ಹಿಂತಿರುಗುವ ಸಂದರ್ಭದಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಪ್ಯಾರಿಸ್‌ನಲ್ಲಿ ಭೇಟಿ ಮಾಡುವುದಾಗಿಯೂ ತಿಳಿಸಿದ್ದಾರೆ.

‘ಭಾರತದಲ್ಲಿ ಶಾಂತಿ ಮತ್ತು ಸಮೃದ್ಧಿಗಾಗಿ ಯುರೋಪಿಯನ್‌ ಪಾಲುಗಾರಿಕೆ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಯುರೋಪಿಯನ್‌ ಪಾಲುದಾರರೊಂದಿಗೆ ಸಹಕಾರವನ್ನು ಬಲಪಡಿಸುವುದು ಮುಖ್ಯ ಉದ್ದೇಶವಾಗಿದೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಭಾರತ ಮತ್ತು ಜರ್ಮನಿ ನಡುವಿನ ದೀರ್ಘಾವಧಿಯ ವಾಣಿಜ್ಯ ಸಂಬಂಧಗಳು ಕಾರ್ಯತಂತ್ರದ ಪಾಲುದಾರಿಕೆಯ ಆಧಾರ ಸ್ತಂಭಗಳಲ್ಲಿ ಒಂದಾಗಿವೆ. ಉದ್ಯಮ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಚಾನ್ಸೆಲರ್ ಸ್ಕೋಲ್ಜ್ ಅವರೊಟ್ಟಿಗೆ ವಾಣಿಜ್ಯ ಕ್ಷೇತ್ರದ ದುಂಡುಮೇಜಿನ ಸಭೆಯಲ್ಲಿ ಮಾತನಾಡಲಾಗುವುದು’ ಎಂದೂ ಮೋದಿ ಹೇಳಿದ್ದಾರೆ.

‘ಭಾರತ- ಡೆನ್ಮಾರ್ಕ್ ವ್ಯಾಪಾರ ಕ್ಷೇತ್ರ ಬಲಪಡಿಸುವ ಉದ್ದೇಶದಿಂದ ಅಲ್ಲಿಯೂ ವಾಣಿಜ್ಯ ಕ್ಷೇತ್ರದ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸುತ್ತೇನೆ. ಡೆನ್ಮಾರ್ಕ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸುತ್ತೇನೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವರ್ಷದ ಮೊದಲ ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅವರು ಮೂರು ದಿನಗಳಲ್ಲಿ 25 ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.