ADVERTISEMENT

ಪುಲ್ವಾಮಾ ದಾಳಿಗೆ ಏಳು ವರ್ಷ: ಹುತಾತ್ಮರಿಗೆ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ನಮನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಫೆಬ್ರುವರಿ 2026, 8:09 IST
Last Updated 14 ಫೆಬ್ರುವರಿ 2026, 8:09 IST
   

ನವದೆಹಲಿ: ಜಮ್ಮು–ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ಉಗ್ರರು ನಡೆಸಿದ್ದ ಭೀಕರ ದಾಳಿಗೆ ಇಂದಿಗೆ (ಫೆ.14) 7 ವರ್ಷ ವರ್ಷವಾಗಿದೆ. ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಅನೇಕ ಗಣ್ಯರು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮೋದಿ, 2019ರ ಈ ದಿನದಂದು ಪುಲ್ವಾಮಾದಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರ ಯೋಧರನ್ನ ಸ್ಮರಿಸುತ್ತಾ, ರಾಷ್ಟ್ರಕ್ಕೆ ಅವರು ನೀಡಿದ ಸೇವೆ ಭಾರತೀಯರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಯೋಧರ ಧೈರ್ಯ, ಸಂಕಲ್ಪ ಪ್ರತಿಯೊಬ್ಬರಿಗೂ ಸ್ಫೂತಿ ನೀಡುತ್ತದೆ ಎಂದು ಹೇಳಿದ್ದಾರೆ.

ADVERTISEMENT

ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ವೀರ ಸೈನಿಕರಿಗೆ ನನ್ನ ನಮನಗಳು. ಭಾರತ ಮಾತೆಯ ರಕ್ಷಣೆಗಾಗಿ ಅವರು ಮಾಡಿದ ತ್ಯಾಗ ಸದಾ ಸ್ಮರಿಸುವಂತಹದ್ದು ಎಂದು 'ಎಕ್ಸ್‌' ಪೋಸ್ಟ್‌ನಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಬರೆದುಕೊಂಡಿದ್ದಾರೆ.

ಪುಲ್ವಾಮಾದಲ್ಲಿ ನಡೆದ ಹೇಡಿತನದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಧೈರ್ಯಶಾಲಿ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಸ್ಮರಿಸುತ್ತೇನೆ. ಯೋಧರ ಕುಟುಂಬಗಳೊಂದಿಗೆ ರಾಷ್ಟ್ರವು ಒಗ್ಗಟ್ಟಿನಿಂದ ನಿಂತಿದೆ. ಯೋಧರ ತ್ಯಾಗ, ರಾಷ್ಟ್ರಕ್ಕೆ ಭಯೋತ್ಪಾದನೆಯಿಂದ ಉಂಟಾದ ಗಂಭೀರತೆಯ ನೆನಪಾಗಿ ಉಳಿದಿದೆ. ಭಯೋತ್ಪಾದನೆಯನ್ನು ಎದುರಿಸಲು ಮತ್ತು ನಿರ್ಮೂಲನೆ ಮಾಡಲು ಭಾರತ ಬದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ 'ಎಕ್ಸ್‌' ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿಗೆ ಹುತಾತ್ಮರಾದ ದೇಶದ ಹೆಮ್ಮೆಯ ವೀರಯೋಧರನ್ನು ಈ ದಿನ ಗೌರವದಿಂದ ಸ್ಮರಿಸಿ, ನಮಿಸುತ್ತೇನೆ. ನಮ್ಮ ಸೈನಿಕರ ತ್ಯಾಗ - ಬಲಿದಾನವು ಭಾರತವನ್ನು ಸಶಕ್ತ - ಸಾರ್ವಭೌಮ ರಾಷ್ಟ್ರವಾಗಿಸಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ 'ಎಕ್ಸ್' ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪುಲ್ವಾಮಾ ದಾಳಿಯಲ್ಲಿ ಧೈರ್ಯಶಾಲಿ ಸಿಆರ್‌ಪಿಎಫ್ ಯೋಧರನ್ನು ಕಳೆದುಕೊಂಡೆವು. ಆದರೆ ಅವರ ಆತ್ಮವು ಜೀವಂತವಾಗಿದೆ. ಅವರ ಧೈರ್ಯವು ಶಾಂತಿ ಮತ್ತು ಏಕತೆಯನ್ನು ನೆನಪಿಸುತ್ತದೆ. ಈ ಕರಾಳ ದಿನದಂದು ಯೋಧರ ತ್ಯಾಗವನ್ನು ಗೌರವಿಸುತ್ತಾ, ಅವರನ್ನು ಸದಾ ಸ್ಮರಿಸೋಣ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ 'ಎಕ್ಸ್‌' ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಪ್ರಾಣಾರ್ಪಣೆ ಮಾಡಿದ ಎಲ್ಲಾ ಯೋಧರನ್ನು ಅತ್ಯಂತ ಭಾವಪೂರ್ಣವಾಗಿ ಸ್ಮರಿಸಿ ನಮಿಸುತ್ತೇನೆ.ಈ ಕರಾಳ ದಿನವನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಯೋಧರ ತ್ಯಾಗ ಬಲಿದಾನವನ್ನು ರಾಷ್ಟ್ರವು ಎಂದೆಂದಿಗೂ ಮರೆಯುವುದಿಲ್ಲ. ಅವರ ತ್ಯಾಗವು ರಾಷ್ಟ್ರಭಕ್ತಿ, ಅಚಲ ಬದ್ಧತೆಯ ಪ್ರತೀಕವಾಗಿದೆ ಎಂದು ಎಚ್‌.ಡಿ. ಕುಮಾರಸ್ವಾಮಿ 'ಎಕ್ಸ್‌' ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.