ADVERTISEMENT

ಜಮ್ಮು–ಕಾಶ್ಮೀರದಲ್ಲಿ ಪ್ರಧಾನಿ ಮೋದಿ

ಏಜೆನ್ಸೀಸ್
Published 3 ಫೆಬ್ರುವರಿ 2019, 5:03 IST
Last Updated 3 ಫೆಬ್ರುವರಿ 2019, 5:03 IST
   

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಲೇಹ್‌ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ ಕಟ್ಟಡ ಶಿಲಾನ್ಯಾಸ, ಏಮ್ಸ್‌ ಸ್ಥಾಪನೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ನಡೆಸಲಿದ್ದಾರೆ. ಭದ್ರತೆ ಕಾರಣಗಳಿಗಾಗಿ ಮೊಬೈಲ್‌ ಇಂಟರ್‌ನೆಟ್‌ ಸಂಪರ್ಕ ವ್ಯವಸ್ಥೆಯನ್ನು ಕಡಿತಗೊಳಿಸಲಾಗಿದೆ.

ಇಡೀ ದಿನ ಜಮ್ಮು–ಕಾಶ್ಮೀರದಲ್ಲಿ ಕಳೆಯಲಿರುವ ಪ್ರಧಾನಿ ಮೋದಿ, ವಿಜಯ್‌ಪುರದಲ್ಲಿ ₹35,000 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಕಾಶ್ಮೀರ ಮತ್ತು ಲಡಾಕ್‌ಗಳಿಗೆ ₹9,000 ಕೋಟಿ ಮೊತ್ತ ಯೋಜನೆಗಳು, ಜಮ್ಮು ಮತ್ತು ಶ್ರೀನಗರ ವಲಯದಲ್ಲಿ ಎರಡು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್‌)ಗಳನ್ನು ಉದ್ಘಾಟಿಸಲಿದ್ದಾರೆ.

ಉತ್ತರ ಕಾಶ್ಮೀರದ ಬಾಂಡಿಪೂರ್‌ ಜಿಲ್ಲೆಯಲ್ಲಿ ಬಿಪಿಒ ಕೇಂದ್ರ ಉದ್ಘಾಟಿಸಿದ್ದಾರೆ. ಇದೇ ಮೊದಲ ಬಾರಿಗೆಕಾಶ್ಮೀರದ ಗ್ರಾಮೀಣ ಭಾಗದಲ್ಲಿ ಬಿಪಿಒವೊಂದು ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ ಜೂನ್‌ನಲ್ಲಿ ಬಿಜೆಪಿಯು ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ(ಪಿಡಿಪಿ)ಗೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿತ್ತು. ಆ ಬಳಿಕ ಮೊದಲ ಸಲ ಪ್ರಧಾನಿ ಮೋದಿ ಜಮ್ಮು–ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.

ADVERTISEMENT

ಜಮ್ಮುವಿನ ವಿಜಯ್‌ಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದು, ಇಲ್ಲಿಂದ ಲೋಕಸಭಾ ಚನಾವಣೆಗೆ ಪ್ರಚಾರ ಆರಂಭಿಸಲಿದ್ದಾರೆ. ಮೊದಲು ಲೇಹ್‌ಗೆ ಭೇಟಿ ನೀಡಿ ಅಲ್ಲಿಂದ ಜಮ್ಮುವಿಗೆ ಪ್ರಯಾಣ ಬೆಳೆಸಲಿದ್ದಾರೆ. ಗ್ರಾಮಗಳ ಮುಖಂಡರಾದ ಸರ್‌ಪಂಚ್‌ಗಳನ್ನು ಭೇಟಿಯಾಗಲಿದ್ದು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಂಜೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ.

ಪ್ರಧಾನಿ ಭೇಟಿ ಹಿನ್ನೆಲೆ ಶ್ರೀನಗರದಲ್ಲಿ ಸಂಚಾರ ದಟ್ಟಣೆ

ಸಭೆ ನಡೆಯಲಿರುವ ಶ್ರೀನಗರದ ಎಸ್‌.ಕೆ.ಇಂಟರ್‌ನ್ಯಾಷನ್‌ ಕಾನ್ಫರೆನ್ಸ್‌ ಸೆಂಟರ್‌ ಸುತ್ತಮುತ್ತಲು ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿದೆ. ಈಗಾಲೇ ಸಂಚಾರ ಮಾರ್ಗಗಳನ್ನು ಬದಲಿಸಲಾಗಿದೆ. ದಾಖಲೆಗಳಿಲ್ಲದ ಸುಮಾರು ಹನ್ನೆರಡು ದ್ವಿಚಕ್ರ ವಾಹನಗಳನ್ನು ಶನಿವಾರ ಬಂಧಿಸಲಾಗಿದೆ.

ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಹುರಿತ್‌ ಮುಖಂಡ ಮಿರ್ವೈಸ್‌ ಉಮರ್‌ ಫಾರೂಕ್‌ರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಪ್ರತ್ಯೇಕವಾದಿ ಸಂಘಟನೆಗಳು ಪ್ರಧಾನಿ ಭೇಟಿಯನ್ನು ವಿರೋಧಿಸಿ ಇಡೀ ದಿನ ಮುಷ್ಕರಕ್ಕೆ ಕರೆ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.