ADVERTISEMENT

ಪ್ರಧಾನಿ ನರೇಂದ್ರ ಮೋದಿ ಆರ್ಥಿಕತೆಯನ್ನು ಅರ್ಥೈಸಿಕೊಂಡಿಲ್ಲ: ರಾಹುಲ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 11:24 IST
Last Updated 28 ಜನವರಿ 2020, 11:24 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ಜೈಪುರ: ಪ್ರಧಾನಿ ನರೇಂದ್ರ ಮೋದಿಯವರು ಬಹುಶಃ ಆರ್ಥಿಕತೆಯನ್ನು ಓದಿಲ್ಲ ಅಥವಾ ಅರ್ಥಮಾಡಿಕೊಂಡಿಲ್ಲ ಹೀಗಾಗಿಯೇ ಮೋದಿ ದೇಶದ ಘನತೆಯನ್ನು ವಿದೇಶಗಳಲ್ಲಿ ಹಾಳುಗೆಡವಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ರಾಜಸ್ತಾನದ ಜೈಪುರದಲ್ಲಿ ನಡೆದ ಯುವ ಆಕ್ರೋಶ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತದ ಜಿಡಿಪಿಯು ಶೇ 9ಕ್ಕೆ ಏರಿಕೆಯಾಗಿತ್ತು. ಇಡೀ ವಿಶ್ವವೇ ಆಗ ನಮ್ಮತ್ತ ತಿರುಗಿ ನೋಡುತ್ತಿತ್ತು. ಇಂದು ಜಿಡಿಪಿಯನ್ನು ಅಳೆಯಲು ವಿವಿಧ ಮಾನದಂಡಗಳನ್ನು ಬಳಸಲಾಗುತ್ತಿದೆ ಮತ್ತು ಅದರಂತೆ ಜಿಡಿಪಿ ಶೇ 5ರಷ್ಟಿದೆ. ಒಂದು ವೇಳೆ ನೀವು ಹಳೆಯ ಮಾನದಂಡಗಳನ್ನು ಬಳಸಿದ್ದೇ ಆದರೆ ಭಾರತದ ಬೆಳವಣಿಗೆ ದರವು ಶೇ 2.5ರಷ್ಟಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ 2 ಲಕ್ಷ ಉದ್ಯೋಗ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕಳೆದ ವರ್ಷ ನಮ್ಮ ಯುವಜನತೆ 1 ಲಕ್ಷ ಉದ್ಯೋಗಗಳನ್ನು ಕಳೆದುಕೊಳ್ಳುವಂತಾಯಿತು. ಪ್ರಧಾನಿ ಎಲ್ಲಿಗೇ ಹೋದರು ಕೂಡ ಸಿಎಎ, ಎನ್‌ಆರ್‌ಸಿ ಬಗ್ಗೆ ಮಾತನಾಡುತ್ತಾರೆ ಹೊರತು ಅತಿದೊಡ್ಡ ಸಮಸ್ಯೆಗಳಾದ ನಿರುದ್ಯೋಗವನ್ನು ಪ್ರಸ್ತಾಪಿಸುವುದಿಲ್ಲ. ಈ ಕುರಿತು ಇದುವರೆಗೂ ಒಂದು ಪದ ಕೂಡ ಮಾತನಾಡಿಲ್ಲ ಎಂದು ತಿಳಿಸಿದರು.

ADVERTISEMENT

ಆರ್ಥಿಕ ಹಿಂಜರಿತದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಬಹುಶಃ ಪ್ರಧಾನಿ ಮೋದಿಯವರು ಆರ್ಥಿಕತೆಯನ್ನು ಓದಿಲ್ಲ ಅಥವಾ ಅರ್ಥಮಾಡಿಕೊಂಡಿಲ್ಲ. ಇದಲ್ಲದೆ ಪ್ರದಾನಿ ಮೋದಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಎಂದರೇನು ಎನ್ನುವುದನ್ನು ಕೂಡ ಅರ್ಥಮಾಡಿಕೊಂಡಿಲ್ಲ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ್ದರ ಕುರಿತು 8 ವರ್ಷದ ಮಗುವನ್ನು ಕೇಳಿದರೂ ಕೂಡ ನೋಟು ನಿಷೇಧವು ಒಳ್ಳೆಯದಕ್ಕಿಂತಲೂ ಹೆಚ್ಚು ಹಾನಿಯನ್ನೇ ಸೃಷ್ಟಿಸಿತು ಎಂದು ಹೇಳುತ್ತಾರೆ ಎಂದರು.

ಜಾಗತಿಕವಾಗಿ ಭಾರತ ಸೋದರತ್ವ, ಪ್ರೀತಿ ಮತ್ತು ಏಕತೆಯ ಮೂಲಕತನ್ನ ಘನತೆಯನ್ನು ಹೆಚ್ಚಿಸಿಕೊಂಡಿತ್ತು. ಈ ಮಧ್ಯೆ ಪಾಕಿಸ್ತಾನವು ದ್ವೇಷ ಮತ್ತು ವಿಭಜನೆಗಾಗಿ ಹೆಸರಾಗಿತ್ತು. ಆದರೆ ಭಾರತದ ಈ ಘನತೆಯನ್ನು ಪ್ರಧಾನಿ ಮೋದಿ ನಾಶ ಮಾಡಿದ್ದಾರೆ. ಭಾರತವನ್ನು ಇಂದು ವಿಶ್ವದ ಅತ್ಯಾಚಾರಗಳ ರಾಜಧಾನಿಯನ್ನಾಗಿ ಪರಿಗಣಿಸಲಾಗುತ್ತಿದೆ. ಈ ಬಗ್ಗೆ ಪ್ರಧಾನಿ ಒಂದು ಮಾತನ್ನು ಆಡುವುದಿಲ್ಲ. ನಿರುದ್ಯೋಗದ ಕುರಿತು ಯುವಜನರು ಮೋದಿಯನ್ನು ಪ್ರಶ್ನಿಸಿದರೆ, ಅಂತವರನ್ನು ಗುರಿಯಾಗಿಸಲಾಗುತ್ತಿದೆ ಮತ್ತು ಗುಂಡಿಕ್ಕಲಾಗುತ್ತಿದೆ ಎಂದು ದೂರಿದರು.

ಪ್ರಧಾನಿ ಮೋದಿಗೆ ನಾನು ಸವಾಲೆಸೆಯುತ್ತೇನೆ. ಭಾರತದ ಯಾವುದಾದರೊಂದು ವಿಶ್ವವಿದ್ಯಾಲಯಕ್ಕೆ ತೆರಳಿ ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗೆ ಉತ್ತರಿಸಲಿ. ಮೋದಿಗೆ ವಿದ್ಯಾರ್ಥಿಗಳನ್ನು ಎದುರಿಸಲು ಆಗುವುದಿಲ್ಲ. ಆದರೆ ಸುಳ್ಳು ಭರವಸೆಗಳನ್ನು ಮಾತ್ರ ನೀಡುತ್ತಾರೆ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.