ADVERTISEMENT

ಉಜ್ವಲ 2.0: ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಿಂದ ಪ್ರಧಾನಿ ಮೋದಿ ಇಂದು ಚಾಲನೆ

ಪಿಟಿಐ
Published 10 ಆಗಸ್ಟ್ 2021, 1:51 IST
Last Updated 10 ಆಗಸ್ಟ್ 2021, 1:51 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ    

ಲಖನೌ: ಉಜ್ವಲ 2.0 (ಪ್ರಧಾನ ಮಂತ್ರಿ ಉಜ್ವಲ ಯೋಜನೆ-ಪಿಎಂಯುವೈ) ಯೋಜನೆಗೆ ಪ್ರಧಾನಿ ನರೇಂದ್ರಮೋದಿ ಅವರು ಮಂಗಳವಾರ (ಆಗಸ್ಟ್ 10)ರಂದು ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಮಹೋಬಾದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಮೋದಿ ಅವರು ಎಲ್‌ಪಿಜಿ ಸಂಪರ್ಕಗಳನ್ನು ವಿತರಿಸಿ ಉಜ್ವಲ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ADVERTISEMENT

ಯೋಜನೆಯ ಮೊದಲ ಹಂತದಲ್ಲಿ 1,47,43,862 ಎಲ್‌ಪಿಜಿ ಸಂಪರ್ಕಗಳನ್ನು ರಾಜ್ಯದ ಬಡ ಕುಟುಂಬಗಳಿಗೆ ಒದಗಿಸಲಾಗಿದ್ದು, ಉಜ್ವಲ ಯೋಜನೆಯ ಮೊದಲ ಹಂತದಿಂದ ಹೊರಗುಳಿದ ಕುಟುಂಬಗಳು ಎರಡನೇ ಹಂತದಲ್ಲಿ ಪ್ರಯೋಜನವನ್ನು ಪಡೆಯಲಿವೆ ಎಂದು ವಕ್ತಾರರು ತಿಳಿಸಿದ್ದಾರೆ.

ವಿಶ್ವ ಜೈವಿಕ ಇಂಧನ ದಿನಾಚರಣೆಯ ಸಂದರ್ಭದಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮಹೋಬಾ ಜಿಲ್ಲೆಯ ಪೊಲೀಸ್ ಲೈನ್ಸ್ ಪರೇಡ್ ಮೈದಾನದಲ್ಲಿ ಆಯೋಜಿಸಿರುವ ಜೈವಿಕ ಇಂಧನ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ಮುಜಾಫರ್‌ನಗರ ಜಿಲ್ಲೆಯಲ್ಲಿ ಸ್ಥಾಪಿಸಲಾಗುತ್ತಿರುವ ಸಂಕುಚಿತ ಜೈವಿಕ ಅನಿಲ ಘಟಕವನ್ನು ಕೂಡ ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.