ADVERTISEMENT

ಪಿಎಂಒ ಈಗ ‘ಸೇವಾ ತೀರ್ಥ’: ಮಹಿಳೆ, ರೈತರು, ಯುವ ಜನರ ಕಲ್ಯಾಣಕ್ಕೆ ಹಲವು ನಿರ್ಣಯ

ಪಿಟಿಐ
Published 13 ಫೆಬ್ರುವರಿ 2026, 16:15 IST
Last Updated 13 ಫೆಬ್ರುವರಿ 2026, 16:15 IST
<div class="paragraphs"><p>ನವದೆಹಲ್ಲಿ ಪ್ರಧಾನ ಮಂತ್ರಿ ಕಚೇರಿ ನೂತನ ಕಟ್ಟಡ ‘ಸೇವಾ ತೀರ್ಥ’ವನ್ನು ಶುಕ್ರವಾರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ನೂತನ ಕಚೇರಿಯ ಹೆಸರುಳ್ಳ ಫಲಕವನ್ನು ಅನಾವರಣಗೊಳಿಸಿದರು&nbsp; ಪಿಟಿಐ ಚಿತ್ರ&nbsp; &nbsp;</p></div>

ನವದೆಹಲ್ಲಿ ಪ್ರಧಾನ ಮಂತ್ರಿ ಕಚೇರಿ ನೂತನ ಕಟ್ಟಡ ‘ಸೇವಾ ತೀರ್ಥ’ವನ್ನು ಶುಕ್ರವಾರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ನೂತನ ಕಚೇರಿಯ ಹೆಸರುಳ್ಳ ಫಲಕವನ್ನು ಅನಾವರಣಗೊಳಿಸಿದರು  ಪಿಟಿಐ ಚಿತ್ರ   

   

ನವದೆಹಲಿ: ಪ್ರಧಾನ ಮಂತ್ರಿ ಕಚೇರಿಯನ್ನು(ಪಿಎಂಒ) ನೂತನ ಕಟ್ಟಡ ‘ಸೇವಾ ತೀರ್ಥ’ಕ್ಕೆ ಶುಕ್ರವಾರ ಸ್ಥಳಾಂತರಗೊಳಿಸಲಾಯಿತು. ಇನ್ನು ಮುಂದೆ ‘ಪ್ರಧಾನ ಮಂತ್ರಿ ಕಚೇರಿ’ಯನ್ನು ‘ಸೇವಾ ತೀರ್ಥ’ ಎಂದೇ ಕರೆಯಲಾಗುತ್ತದೆ.

ಈ ಮೊದಲು ರಾಷ್ಟ್ರಪತಿ ಭವನ ಬಳಿಯ ಸೌತ್‌ ಬ್ಲಾಕ್‌ನಲ್ಲಿ ಈ ಕಚೇರಿ ಇತ್ತು. 95 ವರ್ಷಗಳ ನಂತರ ಪಿಎಂಒ  ಸ್ಥಳಾಂತರಗೊಳಿಸಿದಂತಾಗಿದೆ. 

ADVERTISEMENT

ಕೇಂದ್ರೀಯ ಸಚಿವಾಲಯ ಎರಡು ಕಟ್ಟಡಗಳನ್ನು ಹೊಂದಿದ್ದು, ಇವುಗಳನ್ನು ‘ಕರ್ತವ್ಯ ಭವನ 1’ ಹಾಗೂ ‘ಕರ್ತವ್ಯ ಭವನ 2’ ಎಂಬುದಾಗಿ ಕರೆಯಲಾಗುತ್ತದೆ.

1931ರ ಫೆಬ್ರುವರಿ 13ರಂದು ನವದೆಹಲಿಯನ್ನು ಭಾರತದ ರಾಜಧಾನಿಯಾಗಿ ಘೋಷಿಸಲಾಗಿತ್ತು. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವಸಾಹತುಶಾಹಿ ಕಾಲದ ಪ್ರತೀಕಗಳನ್ನು ಬದಲಾಯಿಸಿ, ದೇಸಿತನಕ್ಕೆ ಒತ್ತು ನೀಡುತ್ತಿರುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಮನೋಹರ ಲಾಲ್‌ ಖಟ್ಟರ್, ಜಿತೇಂದ್ರ ಸಿಂಗ್‌ ಹಾಗೂ ಪಿಎಂಒದ ಉನ್ನತ ಅಧಿಕಾರಿಗಳಿದ್ದ ವಾಹನಗಳು ಸೌತ್ ಬ್ಲಾಕ್‌ನಿಂದ ಹೊರಟು ‘ಸೇವಾ ತೀರ್ಥ’ ತಲುಪಿದವು.

ನೂತನ ಕಚೇರಿಯಲ್ಲಿ ಪಿಎಂಒ, ರಾಷ್ಟ್ರೀಯ ಭದ್ರತಾ ಪರಿಷತ್ತಿನ ಸಚಿವಾಲಯ ಹಾಗೂ ಸಂಪುಟ ಸಚಿವಾಲಯ ಕಚೇರಿಗಳನ್ನು ಮೋದಿ ಉದ್ಘಾಟಿಸಿದರು. 

ನೂತನ ಕಚೇರಿಗೆ ಪ್ರವೇಶಿಸಿದ ಬಳಿಕ ಅಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗೆ ಮೋದಿ ಪೂಜೆ ಸಲ್ಲಿಸಿದರು. ‘ಸೇವಾ ತೀರ್ಥ’ ಎಂದು ದೇವನಾಗರಿ ಲಿಪಿಯಲ್ಲಿ ಬರೆದಿರುವ ಫಲಕವನ್ನು ಇದೇ ವೇಳೆ ಅವರು ಅನಾವರಣಗೊಳಿಸಿದರು. ‘ನಾಗರಿಕ ದೇವೋ ಭವ’ ಎಂಬ ಅಡಿಬರಹವೂ ಇದೇ ಫಲಕದಲ್ಲಿದೆ.

ಬಳಿಕ, ಮಹಿಳೆಯರು, ರೈತರು, ಯುವ ಜನತೆ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಕುರಿತ ಯೋಜನೆಗಳಿಗೆ ಸಂಬಂಧಿಸಿ ಹಲವು ನಿರ್ಧಾರಗಳನ್ನು ತೆಗೆದುಕೊಂಡರು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್, ಪ್ರಧಾನ ಕಾರ್ಯದರ್ಶಿಗಳಾದ ಪಿ.ಕೆ.ಮಿಶ್ರಾ, ಶಕ್ತಿಕಾಂತ ದಾಸ್ ಸೇರಿ ಉನ್ನತ ಅಧಿಕಾರಿಗಳು ಇದ್ದರು. 

ಹಲವು ದಶಕಗಳಿಂದ ಕೇಂದ್ರ ಸರ್ಕಾರದ ಪ್ರಮುಖ ಕಚೇರಿಗಳು ಹಾಗೂ ಸಚಿವಾಲಯಗಳು ಸೆಂಟ್ರಲ್‌ ವಿಸ್ತಾ ಪ್ರದೇಶದಲ್ಲಿನ ವಿವಿಧ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಅನೇಕ ಕಟ್ಟಡಗಳು ಶಿಥಿಲವಾಗಿದ್ದವು.

‘ಸೇವಾ ತೀರ್ಥ’ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಕಡತಗಳಿಗೆ ಶುಕ್ರವಾರ ಸಹಿ ಹಾಕಿದರು   

ಹೊಸ ಕಟ್ಟಡಗಳಿಗೆ ಕಚೇರಿಗಳನ್ನು/ಸಚಿವಾಲಯಗಳನ್ನು ಸ್ಥಳಾಂತರಗೊಳಿಸುವ ಜೊತೆಗೆ, ಅವುಗಳ ಹೆಸರುಗಳನ್ನು ಕೂಡ ಬದಲಾಯಿಸುವುದಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.

ಇದರ ಭಾಗವಾಗಿ, ಪ್ರಧಾನಿಯ ಗೃಹ ಕಚೇರಿ ಇರುವ ‘ರೇಸ್‌ ಕೋರ್ಸ್‌ ರಸ್ತೆ’ಯನ್ನು ‘ಲೋಕ ಕಲ್ಯಾಣ ಮಾರ್ಗ’ ಎಂದು ಬದಲಾಯಿಸಲಾಗಿದೆ. ಕೇಂದ್ರ ಸಚಿವಾಲಯದ ಕಚೇರಿಗಳಿರುವ ಕಟ್ಟಡವನ್ನು ‘ಕರ್ತವ್ಯ ಭವನ’ ಹಾಗೂ ರಾಜಪಥವನ್ನು ‘ಕರ್ತವ್ಯ ಪಥ’ ಎಂಬುದಾಗಿ ಬದಲಾಯಿಸಲಾಗಿದೆ.

‘ಸೇವಾ ತೀರ್ಥ’ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗಣೇಶ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಧಾರ್ಮಿಕ ವಿಧಿಗಳನ್ನು ಶುಕ್ರವಾರ ನೆರವೇರಿಸಿದರು 

ರಾಜಭವನ ಹಾಗೂ ರಾಜನಿವಾಸಗಳ ಹೆಸರುಗಳನ್ನು ಸಹ ಬದಲಾಯಿಸಲಾಗಿದೆ. ಇವುಗಳನ್ನು ಕ್ರಮವಾಗಿ ಲೋಕ ಭವನ ಹಾಗೂ ಲೋಕ ನಿವಾಸ ಎಂದು ಮರುನಾಮಕರಣ ಮಾಡಲಾಗಿದೆ.

‘ಸೇವಾ ತೀರ್ಥ’ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗಣೇಶ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಧಾರ್ಮಿಕ ವಿಧಿಗಳನ್ನು ಶುಕ್ರವಾರ ನೆರವೇರಿಸಿದರು 

ಪ್ರಮುಖ ನಿರ್ಧಾರಗಳು

  • ‘ಪ್ರಧಾನ ಮಂತ್ರಿ ರಾಹತ್‌’ ಯೋಜನೆಗೆ ಪ್ರಧಾನಿ ಅನುಮೋದನೆ ನೀಡಿದರು. ಅಪಘಾತಗಳು ಸಂಭವಿಸಿದ ವೇಳೆ ಸಂತ್ರಸ್ತರಿಗೆ ₹1.5 ಲಕ್ಷ ಮೊತ್ತದಷ್ಟು ನಗದುರಹಿತ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ. ಅಪಘಾತಗಳ ಸಂದರ್ಭದಲ್ಲಿ ತಕ್ಷಣಕ್ಕೆ ವೈದ್ಯಕೀಯ ನೆರವು ಸಿಗದ ಕಾರಣಕ್ಕಾಗಿ ಜೀವ ಹಾನಿ ಆಗುವುದನ್ನು ತಪ್ಪಿಸುವುದು ಈ ಯೋಜನೆ ಉದ್ದೇಶವಾಗಿದೆ

  • ‘ಲಖ್‌ಪತಿ ದೀದಿ‘ಗಳ ಸಂಖ್ಯೆಯನ್ನು 6 ಕೋಟಿಗೆ ಹೆಚ್ಚಿಸುವ ಗುರಿಯನ್ನು ನಿಗದಿಪಡಿಸುವ ಕಡತಕ್ಕೆ ಮೋದಿ ಸಹಿ ಹಾಕಿದರು. ಈ ಮೊದಲು ಮಾರ್ಚ್‌ 2027ರ ಒಳಗಾಗಿ ‘ಲಖ್‌ಪತಿ ದೀದಿಗಳ ಸಂಖ್ಯೆಯನ್ನು 3 ಕೋಟಿಗೆ ತಲುಪುವ ಗುರಿ ನಿಗದಿಪಡಿಸಲಾಗಿತ್ತು. ಅವಧಿಗಿಂತಲೂ ಮೊದಲೇ ಗುರಿ ಸಾಧಿಸಲಾಗಿರುವ ಕಾರಣ 2029ರ ಮಾರ್ಚ್‌ ಒಳಗಾಗಿ ಇವರ ಸಂಖ್ಯೆಯನ್ನು 6 ಕೋಟಿಗೆ ತಲುಪಿಸುವ ಗುರಿಯನ್ನು ನಿಗದಿಪಡಿಸಲಾಗಿದೆ

  • ರೈತರಿಗೆ ಉತ್ತೇಜನ ನೀಡುವುದಕ್ಕಾಗಿ ‘ಕೃಷಿ ಮೂಲಸೌಕರ್ಯ ನಿಧಿ’ಯ ಮೊತ್ತವನ್ನು ದ್ವಿಗುಣಗೊಳಿಸಲಾಗಿದ್ದು ₹2 ಲಕ್ಷ ಕೋಟಿಗೆ ಹೆಚ್ಚಿಸುವ ನಿರ್ಧಾರಕ್ಕೆ ಸಹಿ ಹಾಕಿದ್ದಾರೆ * ಸ್ಟಾರ್ಟ್‌ಅಪ್‌ ಇಂಡಿಯಾ ಫಂಡ್‌ ಆಫ್‌ ಫಂಡ್ಸ್‌ 2.0ಗೆ ಅನುಮೋದನೆ ನೀಡಿ ₹10 ಸಾವಿರ ಕೋಟಿ ಹಂಚಿಕೆ ಮಾಡಲಾಗಿದೆ. ಇದರಿಂದ ಡೀಪ್‌ ಟೆಕ್‌ ತಯಾರಿಕಾ ಮತ್ತು ನವೀನ ತಂತ್ರಜ್ಞಾನಗಳ ಕ್ಷೇತ್ರಕ್ಕೆ ಬಲ ತುಂಬಲು ಸಾಧ್ಯವಾಗುವುದು 

ಬದ್ಧತೆಯ ಪ್ರತೀಕ: ಮೋದಿ

‘ಪ್ರಧಾನ ಮಂತ್ರಿ ಕಚೇರಿ(ಸೇವಾ ತೀರ್ಥ) ಹಾಗೂ ಕೇಂದ್ರೀಯ ಸಚಿವಾಲಯ(ಕರ್ತವ್ಯ ಭವನ) ಒಳಗೊಂಡಿರುವ ಹೊಸ ಕಟ್ಟಡಗಳು ವಿಕಸಿತ ಭಾರತದತ್ತ ದೇಶ ಕೈಗೊಂಡಿರುವ ಪಯಣದಲ್ಲಿ ಮಹತ್ವದ ಮೈಲುಗಲ್ಲುಗಳಾಗಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ‘ಸೇವಾ ತೀರ್ಥ’ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು‘ಈ ಕಟ್ಟಡಗಳು ನಾಗರಿಕ ಕೇಂದ್ರಿತ ಆಡಳಿತ ಮತ್ತು ದೇಶದ ಅಭಿವೃದ್ಧಿ ಕುರಿತು ನಮ್ಮ ಸರ್ಕಾರ ಹೊಂದಿರುವ ಬದ್ಧತೆಯನ್ನು ಪ್ರತಿಫಲಿಸುತ್ತವೆ’ ಎಂದರು. ‘ರಕ್ಷಣಾ ಗೃಹ ಹಾಗೂ ಹಣಕಾಸು ಸಚಿವಾಲಯಗಳಿರುವ ಐತಿಹಾಸಿಕ ಕಟ್ಟಡಗಳಾದ ಸೌತ್ ಬ್ಲಾಕ್‌ ಹಾಗೂ ನಾರ್ತ್‌ ಬ್ಲಾಕ್‌ ಬ್ರಿಟಿಷ್‌ ಸಾಮ್ರಾಜ್ಯದ ಆದರ್ಶಗಳ ಅಭಿವ್ಯಕ್ತಿಯಂತಿದ್ದವು. ಸೇವಾ ತೀರ್ಥ ಹಾಗೂ ಕರ್ತವ್ಯ ಭವನಗಳನ್ನು ದೇಶದ ಪ್ರಜೆಗಳ ಆಶೋತ್ತರಗಳನ್ನು ಸಾಕಾರಗೊಳಿಸುವುದಕ್ಕಾಗಿ ನಿರ್ಮಿಸಲಾಗಿದೆ’ ಎಂದು ಹೇಳಿದರು.  ಸೇವಾ ತೀರ್ಥದ ಉದ್ಘಾಟನೆ ಸ್ಮರಣಾರ್ಥ ಅದರ ಚಿತ್ರವಿರುವ ಅಂಚೆ ಚೀಟಿ ಹಾಗೂ ನಾಣ್ಯವನ್ನು ಇದೇ ವೇಳೆ ಮೋದಿ ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.