ADVERTISEMENT

Assembly Elections 2022: ಎಲ್ಲಾ ಪಕ್ಷಗಳಿಂದ ಗುರು ರವಿದಾಸ್ ಭಜನೆ

ದಲಿತ ಸಂತ, ಗುರು ಜಯಂತಿಯಲ್ಲಿ ಬಿಜೆಪಿ, ಕಾಂಗ್ರೆಸ್‌, ಎಎಪಿ, ಬಿಎಸ್‌ಪಿ ನಾಯಕರು ಭಾಗಿ

ಪಿಟಿಐ
Published 16 ಫೆಬ್ರುವರಿ 2022, 21:02 IST
Last Updated 16 ಫೆಬ್ರುವರಿ 2022, 21:02 IST
ಎಲ್ಲಾ ಪಕ್ಷಗಳಿಂದ ಗುರು ರವಿದಾಸ್ ಭಜನೆ
ಎಲ್ಲಾ ಪಕ್ಷಗಳಿಂದ ಗುರು ರವಿದಾಸ್ ಭಜನೆ   

ವಾರಾಣಸಿ/ನವದೆಹಲಿ: ಅಸ್ಪೃಶ್ಯತೆ, ಜಾತಿಬೇಧ ಮತ್ತು ಲಿಂಗ ತಾರತಮ್ಯದ ವಿರುದ್ಧ 15–16ನೇ ಶತಮಾನದಲ್ಲಿ ಹೋರಾಡಿದ್ದ ಕವಿ ಮತ್ತು ಸಂತ ಗುರು ರವಿದಾಸ್‌ ಅವರ ಜಯಂತಿಯಲ್ಲಿ ಪ್ರಮುಖ ಪಕ್ಷಗಳು ಭಾಗಿಯಾಗಿವೆ.ದಲಿತರ ಸಬಲೀಕರಣಕ್ಕಾಗಿ ಶ್ರಮಿಸಿದ್ದ ರವಿದಾಸ್ ಅವರಿಗೆ ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಲಕ್ಷಾಂತರ ಅನುಯಾಯಿಗಳು ಇದ್ದಾರೆ. ಚುನಾವಣೆ ಮಧ್ಯೆ ಬಂದಿರುವ ರವಿದಾಸ್ ಅವರ ಜಯಂತಿಯನ್ನು ತಮ್ಮ ಪ್ರಚಾರಕ್ಕಾಗಿ ಕಾಂಗ್ರೆಸ್‌, ಬಿಜೆಪಿ, ಬಿಎಸ್‌ಪಿ ಮತ್ತು ಎಎಪಿ ಬಳಸಿಕೊಂಡಿವೆ.

ಪ್ರತಿ ವರ್ಷದ ಮಾಘ ಪೂರ್ಣಿಮೆ ದಿನದಂದು ಗುರು ರವಿದಾಸ್ ಅವರ ಜಯಂತಿ ಆಚರಿಸಲಾಗುತ್ತದೆ. ರವಿದಾಸ್ ಅವರ ಜನ್ಮಸ್ಥಳವಾದ ವಾರಾಣಸಿಯ ಸೀರ್‌ ಗೋವರ್ಧನಕ್ಕೆ,ಆ ದಿನದಂದು ಉತ್ತರ ಪ್ರದೇಶ ಮತ್ತು ಪಂಜಾಬ್‌ನಿಂದ ಲಕ್ಷಾಂತರ ಮಂದಿ ಅನುಯಾಯಿಗಳು ಭೇಟಿ ನೀಡುತ್ತಾರೆ. ರವಿದಾಸ್ ಅವರ ಮಂದಿರ ಇರುವೆಡೆಯಲ್ಲಿ ಅನ್ನಸಂತರ್ಪಣೆ, ಭಜನೆ–ಕೀರ್ತನೆ ಕಾರ್ಯಕ್ರಮಗಳು ನಡೆಯುತ್ತವೆ.

ಪಂಜಾಬ್‌ ವಿಧಾನಸಭೆಗೆ ಫೆಬ್ರುವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆಸಲು ಚುನಾವಣಾ ಆಯೋಗವು ಈ ಮೊದಲು ಸಿದ್ಧತೆ ಮಾಡಿಕೊಂಡಿತ್ತು. ರವಿದಾಸ್ ಜಯಂತಿಗಾಗಿ ರಾಜ್ಯದಿಂದ ಲಕ್ಷಾಂತರ ಮಂದಿ ವಾರಾಣಸಿಗೆ ಹೋಗುವ ಕಾರಣ, ಮತದಾನಕ್ಕೆ ಜನರು ಲಭ್ಯವಿರುವುದಿಲ್ಲ. ಹೀಗಾಗಿ ಫೆಬ್ರುವರಿ 20ಕ್ಕೆ ಮತದಾನವನ್ನು ಆಯೋಗವು ಮುಂದೂಡಿತ್ತು.

ADVERTISEMENT

ದಲಿತರ ಪ್ರಮುಖ ಗುರುವಾದ ರವಿದಾಸ್‌ ಅವರ ಅನುಯಾಯಿಗಳಲ್ಲಿ ದಲಿತರದ್ದೇ ಬಹುಸಂಖ್ಯೆ.ಪಂಜಾಬ್‌ನ ಒಟ್ಟು ಮತದಾರರಲ್ಲಿ ರವಿದಾಸ್ ಅವರ ಅನುಯಾಯಿಗಳ ಪ್ರಮಾಣ ಶೇ 12ಕ್ಕೂ ಹೆಚ್ಚು. ಉತ್ತರ ಪ್ರದೇಶದ ಹಲವೆಡೆ ಇವರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಹೀಗಾಗಿ ರಾಜಕೀಯ ಪಕ್ಷಗಳು ಈ ಅವಕಾಶವನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿವೆ. ಎಲ್ಲಾ ಪಕ್ಷಗಳ ನಾಯಕರು ರವಿದಾಸ್‌ ಅವರನ್ನು ಸ್ಮರಿಸಿಕೊಳ್ಳುತ್ತಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಬುಧವಾರ ಬೆಳಿಗ್ಗೆ ಸೀರ್ ಗೋವರ್ಧನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನಂತರದ ಕೆಲವೇ ಗಂಟೆಗಳಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಹ ಜನ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ನಡೆಯುತ್ತಿದ್ದ ಅನ್ನಸಂತರ್ಪಣೆಯಲ್ಲಿ ಯೋಗಿ ಆದಿತ್ಯನಾಥ ಅವರು ಸಹಪಂಕ್ತಿ ಭೋಜನ ಮಾಡಿದ್ದಾರೆ. ತಾವು ಪ್ರಸಾದ ಸ್ವೀಕರಿಸುತ್ತಿರುವ ಮತ್ತು ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೊವನ್ನು ಯೋಗಿ ಟ್ವೀಟ್ ಮಾಡಿದ್ದಾರೆ.ಬಿಎಸ್‌ಪಿ ಮುಖ್ಯಸ್ಥೆ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಸಹ ಇಲ್ಲಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಪಂಜಾಬ್‌ನಲ್ಲಿ ಈ ಬಾರಿ ಸ್ಪರ್ಧೆಗೆ ಇಳಿದಿರುವ ಎಎಪಿ ಸಹ ತನ್ನ ಪ್ರಚಾರ ಕಾರ್ಯಕ್ರಮಗಳಲ್ಲಿ ಗುರು ರವಿದಾಸ್ ಅವರ ಸ್ಮರಣೆ ಮಾಡಿದೆ. ದೆಹಲಿಯ ಎಎಪಿ ಸರ್ಕಾರವು ಫೆಬ್ರುವರಿ 16ರಂದು ಗುರು ರವಿದಾಸ್‌ ಜಯಂತಿಯ ಅಂಗಾಗಿ ಸರ್ಕಾರಿ ರಜೆ ಘೋಷಿಸಿದೆ.

ಕೀರ್ತನೆಯಲ್ಲಿ ಮೋದಿ

ದೆಹಲಿಯ ಕರೋಲ್‌ಬಾಗ್‌ನಲ್ಲಿರುವ ಶ್ರೀ ಗುರು ರವಿದಾಸ್ ವಿಶ್ರಾಂತ ಧಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ಮಂದಿರದಲ್ಲಿ ರವಿದಾಸ್ ಅವರ ಅನುಯಾಯಿಗಳು ನಡೆಸುತ್ತಿದ್ದ ಕೀರ್ತನೆ ಕಾರ್ಯಕ್ರಮದಲ್ಲಿ ಮೋದಿ ಅವರು ಭಾಗಿಯಾಗಿದ್ದಾರೆ.

ಕೀರ್ತನೆ ನಡೆಸುತ್ತಿದ್ದವರ ಜತೆಯಲ್ಲಿ ಕುಳಿತು ಮೋದಿ ಅವರು ಗಿಲಕಿ ನುಡಿಸಿದ್ದಾರೆ. ಮೋದಿ ಅವರ ಭಾಗಿಯಾಗುವಿಕೆಯಿಂದ ಪ್ರೇರಣೆಗೊಂಡು ಮತ್ತಷ್ಟು ಅನುಯಾಯಿಗಳು ಕೀರ್ತನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ತಾವು ಕೀರ್ತನೆಯಲ್ಲಿ ಭಾಗಿಯಾದುದರ ವಿಡಿಯೊವನ್ನು ಮೋದಿ ಅವರು ತಮ್ಮ ವೈಯಕ್ತಿಕ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಲ್ಲದೆ, ತಾವು ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೊ ಮತ್ತು ಮಂದಿರದ ಸಂದರ್ಶಕರ ಡೈರಿಯಲ್ಲಿ ತಾವು ಬರೆದ ಪುಟದ ಚಿತ್ರವನ್ನು ಮೋದಿ ಟ್ವೀಟ್ ಮಾಡಿದ್ದಾರೆ.

ಅನ್ನಸಂತರ್ಪಣೆಯಲ್ಲಿ ರಾಹುಲ್, ಪ್ರಿಯಾಂಕಾ ಸೇವೆ

ವಾರಾಣಸಿಯ ಸೀರ್ ಗೋವರ್ಧನ್‌ನಲ್ಲಿ ಗುರು ರವಿದಾಸ್‌ ಅವರ ಜಯಂತಿಯ ಅಂಗವಾಗಿ ಬುಧವಾರ ನಡೆದ ಅನ್ನಸಂತರ್ಪಣೆಯಲ್ಲಿ ಕಾಂಗ್ರೆಸ್‌ ಪ್ರಧಾನಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ನಾಯಕ ರಾಹುಲ್ ಗಾಂಧಿ ಅವರು ಭಾಗಿಯಾಗಿದ್ದರು.

ಅನ್ನಸಂತರ್ಪಣೆ ವೇಳೆ ಇಬ್ಬರೂ ನಾಯಕರು ಊಟ ಬಡಿಸಿದರು. ಆ ವಿಡಿಯೊವನ್ನು ಕಾಂಗ್ರೆಸ್‌ ಟ್ವೀಟ್ ಮಾಡಿದೆ. ಸಾವಿರಾರು ಜನರು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ‘ಗುರು ರವಿದಾಸ್ ಅವರ ಜಯಂತಿಯಂದು ಅವರ ಜನ್ಮಸ್ಥಳಕ್ಕೆ ಭೇಟಿ ನೀಡಿದ್ದು ಖುಷಿ ನೀಡಿದೆ. ಅಲ್ಲಿಗೆ ನನ್ನ ಅಣ್ಣನೊಂದಿಗೆ ಹೋಗಿದ್ದು ಮತ್ತಷ್ಟು ಸಂತಸ ನೀಡಿದೆ’ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

***

ಗುರು ರವಿದಾಸ್‌ ಅವರ ಬೋಧನೆಯಿಂದ ಸ್ಫೂರ್ತಿ ಪಡೆದುಕೊಂಡೇ ಪ್ರಧಾನಿ ನರೇಂದ್ರ ಮೋದಿ ಅವರು ‘ಎಲ್ಲರ ಜತೆ, ಎಲ್ಲರ ವಿಕಾಸ’ದ ಹಾದಿಯಲ್ಲಿ ನಡೆಯುತ್ತಿದ್ದಾರೆ

-ಯೋಗಿ ಆದಿತ್ಯನಾಥ,ಉ.ಪ್ರ. ಸಿಎಂ

****

ಅಸ್ಪೃಶ್ಯತೆ ಮತ್ತು ಅಸಮಾನತೆ ನಿವಾರಣೆಗಾಗಿ ಗುರು ರವಿದಾಸ್ ಅವರು ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಅವರ ಜನ್ಮಸ್ಥಳದ ಅಭವೃದ್ಧಿಗೆ ನಾನು ಶ್ರಮಿಸುತ್ತೇನೆ

-ನರೇಂದ್ರ ಮೋದಿ, ಪ್ರಧಾನಿ

****

ಈ ಎಲ್ಲಾ ಪಕ್ಷಗಳು ದಲಿತರ ಗುರು ರವಿದಾಸ್ ಅವರನ್ನು ಕಡೆಗಣಿಸಿದ್ದವು. ಈಗ ಚುನಾವಣೆ ಕಾರಣಕ್ಕಾಗಿ ದಲಿತರನ್ನು ಓಲೈಸಲು ರವಿದಾಸ್ ಅವರ ಕಾಲಿಗೆ ಬೀಳುತ್ತಿವೆ

-ಮಾಯಾವತಿ, ಬಿಎಸ್‌ಪಿ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.